ತಿರುವನಂತಪುರ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷದಿಂದ ದೂರ ಉಳಿಯಲು ಹಾಗೂ ಹೊಸ ಪಕ್ಷ ಸ್ಥಾಪನೆ ಮಾಡಲು ಕೇರಳ ಜೆಡಿಎಸ್ ನಿರ್ಧಾರ ಮಾಡಿದೆ.
ಜೆಡಿಎಸ್ ನಾಯಕರು ಎನ್‌ಡಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಿದಾಗಿನಿಂದ, ಕೇರಳ ಘಟಕದಲ್ಲಿ ಅಸಮಾಧಾನದ ಅಲೆ ಎದ್ದಿತ್ತು. ಸಿಪಿಎಂ ನೇತೃತ್ವದ ‘ಎಲ್‌ಡಿಎಫ್’ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕೇರಳ ಜೆಡಿಎಸ್‌ಗೆ, ರಾಜ್ಯದಲ್ಲಿ ಮೈತ್ರಿ ಉಳಿಸಿಕೊಳ್ಳುವ ಒತ್ತಡವಿತ್ತು. ಮೈತ್ರಿಕೂಟದ ಮಿತ್ರ ಪಕ್ಷಗಳು ಜೆಡಿಎಸ್‌ನ ಈ ನಡೆಯನ್ನು ಟೀಕಿಸಿದ್ದವು. ಪಕ್ಷದ ನಾಯಕ, ಸಂಸದ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಸೇರಿದ ಬಳಿಕ ಅಸಮಾಧಾನ ಇನ್ನಷ್ಟು ಹೆಚ್ಚಾಗಿತ್ತು.
ಈ ಹಿನ್ನಲೆ ಮಂಗಳವಾರ ಸಭೆ ನಡೆಸಿದ ಕೇರಳ ಜೆಡಿಎಸ್ ನಾಯಕರು, ಹೊಸ ಪಕ್ಷ ಸ್ಥಾಪಿಸಲು ನಿರ್ಧಾರ ಮಾಡಿದ್ದಾರೆ. ಈ ಮಧ್ಯೆ ಅನರ್ಹತೆಯ ಭೀತಿಯಿಂದ ಹೊಸ ಪಕ್ಷದ ಸದಸ್ಯತ್ವ ಪಡೆಯದಿರಲು ಪಕ್ಷದ ಇಬ್ಬರು ಶಾಸಕರು ತೀರ್ಮಾನಿಸಿದ್ದಾರೆ. ಸದ್ಯ ಈ ಇಬ್ಬರು ಶಾಸಕರು ಅಧಿಕೃತ ಪಕ್ಷದಲ್ಲೇ ಉಳಿಯಲಿದ್ದಾರೆ ಎನ್ನಲಾಗಿದೆ.