ಬೆಂಗಳೂರು : ಹೊಸ ವರ್ಷ 2026ರ ಪ್ರಯುಕ್ತ ಬಸ್ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಭರ್ಜರಿ ಸಿಹಿ ಸುದ್ದಿ ನೀಡಿದೆ. ಇಂದಿನಿಂದ (ಜನವರಿ 5) ಜಾರಿಗೆ ಬರುವಂತೆ, ವಿವಿಧ ಬಸ್ ಸೇವೆಗಳ ಪ್ರಯಾಣ ದರಗಳಲ್ಲಿ ಶೇ.10ರಿಂದ ಶೇ.15ರವರೆಗೆ ಇಳಿಕೆ ಮಾಡಲಾಗಿದೆ.
ಇದರೊಂದಿಗೆ, ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಮುಂಗಡ ಬುಕ್ಕಿಂಗ್ ಮಾಡಿದಲ್ಲಿ ಶೇ.5 ರಿಯಾಯಿತಿ ಹಾಗೂ ಒಂದು ಕಡೆ ಮತ್ತು ಎರಡು ಕಡೆ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದರೆ ಶೇ.10 ರಿಯಾಯಿತಿ ನೀಡಲು KSRTC ಆದೇಶ ಹೊರಡಿಸಿದೆ. ಈ ರಿಯಾಯಿತಿಗಳು ಎಲ್ಲಾ ವಿಧದ KSRTC ಬಸ್ ಸೇವೆಗಳಿಗೆ ಅನ್ವಯವಾಗುತ್ತವೆ.
ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರಾಜಹಂಸ, ನಾನ್-ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್ ಮತ್ತು ಮಲ್ಟಿ ಆಕ್ಸಲ್ ಎಸಿ ಸ್ಲೀಪರ್ ಮಾದರಿಯ ಬಸ್‌ಗಳ ಪ್ರಯಾಣ ದರಗಳಲ್ಲೂ ಶೇ.5ರಿಂದ ಶೇ.15ರವರೆಗೆ ರಿಯಾಯಿತಿ ನೀಡಲಾಗಿದೆ.
ಬೆಂಗಳೂರು–ಮಂಗಳೂರು, ಬೆಂಗಳೂರು–ಕುಂದಾಪುರ, ಬೆಂಗಳೂರು–ಉಡುಪಿ, ಬೆಂಗಳೂರು–ಧರ್ಮಸ್ಥಳ, ಬೆಂಗಳೂರು–ಕುಕ್ಕೆ ಸುಬ್ರಮಣ್ಯ, ಬೆಂಗಳೂರು–ಪುತ್ತೂರು, ಬೆಂಗಳೂರು–ಮಡಿಕೇರಿ/ವಿರಾಜಪೇಟೆ, ಬೆಂಗಳೂರು–ದಾವಣಗೆರೆ, ಬೆಂಗಳೂರು–ಶಿವಮೊಗ್ಗ/ಸಾಗರ ಸೇರಿದಂತೆ ಹಲವು ರಾಜ್ಯಾಂತರ ಮಾರ್ಗಗಳಲ್ಲಿ ಈ ರಿಯಾಯಿತಿ ಜಾರಿಯಲ್ಲಿದೆ.
ಅಂತರರಾಜ್ಯ ಮಾರ್ಗಗಳಾದ ಬೆಂಗಳೂರು–ಚೆನ್ನೈ, ಬೆಂಗಳೂರು–ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು–ತಿರುಪತಿ, ಬೆಂಗಳೂರು–ಮಂತ್ರಾಲಯ, ಬೆಂಗಳೂರು–ಪುಣೆ/ಮುಂಬೈ, ಬೆಂಗಳೂರು–ವಿಜಯವಾಡ, ಬೆಂಗಳೂರು–ಎರ್ನಾಕುಲಂ, ಬೆಂಗಳೂರು–ಮದುರೈ, ಬೆಂಗಳೂರು–ಕೋಯಮತ್ತೂರು, ಬೆಂಗಳೂರು–ತ್ರಿಶೂರು ಮಾರ್ಗಗಳಲ್ಲಿ ಸಂಚರಿಸುವ ಎಸಿ ಸ್ಲೀಪರ್ ಬಸ್‌ಗಳ ಟಿಕೆಟ್ ದರಗಳಲ್ಲೂ ಶೇ.5ರಿಂದ ಶೇ.15 ರಿಯಾಯಿತಿ ನೀಡಲಾಗಿದೆ. ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ KSRTC ನ ಅಧಿಕೃತ ವೆಬ್‌ಸೈಟ್ ksrtc.in ಸಂಪರ್ಕಿಸಬಹುದು.

































