ಪಾಟ್ನಾ: ಪಾಟ್ನಾ ಜಂಕ್ಷನ್ ರೈಲ್ವೆ ನಿಲ್ದಾಣದ ಸಮೀಪವಿರುವ ಹೋಟೆಲ್‌ನಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದ್ದು ಆರು ಮಂದಿ ಸಾವನ್ನಪ್ಪಿದ್ದಾರೆ. . ರಕ್ಷಣಾ ಕಾರ್ಯಚರಣೆ ಮುಂದುವರೆದಿದ್ದು, 20ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ.
ಘಟನಾ ಸ್ಥಳಕ್ಕೆ ದೌಡಾಯಿಸಿದ ಗೃಹ ರಕ್ಷಕ ದಳ ಮತ್ತು ಅಗ್ನಿಶಾಮಕ ದಳದ ಡಿಜಿ ಶೋಭಾ ಒಹತ್ಕರ್ ಸುದ್ದಿಗಾರರೊಂದಿಗೆ ಮಾತನಾಡಿ,ನಾವು ಬೆಂಕಿಯನ್ನು ಹತೋಟಿಗೆ ತಂದಿದ್ದೇವೆ, ಅದರ ಬಗ್ಗೆ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮಾಹಿತಿ ಬಂದಿತು. ಸರಿಯಾದ ತನಿಖೆಯ ಮೂಲಕ ನಿಖರವಾದ ಕಾರಣವನ್ನು ಕಂಡುಹಿಡಿಯಲಾಗುವುದು ಮತ್ತು ಸೂಕ್ತ ಕ್ರಮವನ್ನು ಅನುಸರಿಸಲಾಗುವುದು ಎಂದು ಹೇಳಿದ್ದಾರೆ.
ಕಟ್ಟಡದ ಮುಂಭಾಗದಲ್ಲಿರುವ ಸೇತುವೆ ಮೇಲೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಟೇಷನ್ ರಸ್ತೆಯೂ ಸಂಪೂರ್ಣ ಬಂದ್ ಆಗಿದೆ. ಇಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು ಒಂದೂವರೆ ಗಂಟೆಗಳ ನಂತರ ವ್ಯಕ್ತಿಯ ಶವ ಹೊರತೆಗೆಯಲಾಯಿತು. ಅರ್ಧ ಗಂಟೆ ಬಳಿಕ ಇಬ್ಬರು ಬಾಲಕಿಯರ ಮೃತದೇಹಗಳನ್ನು ಹೊರ ತೆಗೆಯಲಾಯಿತು.
ಪಾಲ್ ಹೋಟೆಲ್‌ನಲ್ಲಿ ಬೆಂಕಿ ಅವಘಡದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಟ್ನಾ ಸೆಂಟ್ರಲ್ ರೇಂಜ್ ಟಿಎಸ್‌ಪಿ ಸತ್ಯ ಪ್ರಕಾಶ್ ಖಚಿತಪಡಿಸಿದ್ದಾರೆ. ಅದರಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಪುರುಷರು ಇದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸುಮಾರು 20 ಮಂದಿ ಚಿಕಿತ್ಸೆಗಾಗಿ ಪಿಎಂಸಿಎಚ್ ಗೆ ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಸ್ಥಳದಲ್ಲಿ ಸುಮಾರು ಹತ್ತಾರು ಸಣ್ಣ ಮತ್ತು ದೊಡ್ಡ ಅಗ್ನಿಶಾಮಕ ವಾಹನಗಳಿವೆ. ಬಲವಾದ ಗಾಳಿಯಿಂದಾಗಿ ಪಾಲ್ ಹೋಟೆಲ್‌ನ ಬಲಭಾಗದಲ್ಲಿರುವ ಎರಡೂ ಹೋಟೆಲ್‌ಗಳು ಬೆಂಕಿಗೆ ಆಹುತಿಯಾಗಿವೆ. ಇದುವರೆಗೂ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎನ್ನುವ ಮಾಹಿತಿ ಬಂದಿದೆ.