ಬೆಂಗಳೂರು: ಅರಣ್ಯ ಒತ್ತುವರಿ ತೆರವುಗೊಳಿಸಲು ಕಟ್ಟುನಿಟ್ಟಿನ ಆದೇಶ ನೀಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅನಧಿಕೃತ ಹಾಗೂ ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ ಹೋಮ್ ಸ್ಟೇಗಳನ್ನೂ ತೆರವು ಮಾಡುವಂತೆ ಸೂಚಿಸಿದ್ದಾರೆ.
ಈ ಕುರಿತಂತೆ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿರುವ ಸಚಿವ ಈಶ್ವರ್ ಖಂಡ್ರೆ, ಅದರಲ್ಲಿ ರಾಜ್ಯದ 10 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿ 2015ರ ನಂತರದ ಅರಣ್ಯ ಒತ್ತುವರಿ ತೆರವುಗೊಳಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದ ಕಾರ್ಯಪಡೆ ರಚಿಸಲಾಗಿದ್ದು, ಮೊದಲಿಗೆ ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿರುವ ರೆಸಾರ್ಟ್ ಗಳು, ಹೋಂಸ್ಟೇಗಳನ್ನು ಹಾಗೂ ಕರ್ನಾಟಕ ಅರಣ್ಯ ಕಾಯಿದೆ 19630 64ಎ ಪ್ರಕ್ರಿಯೆ ಪೂರ್ಣಗೊಂಡಿರುವ ಮತ್ತು ನ್ಯಾಯಾಲಯದ ತಡೆಯಾಜ್ಞೆ, ವಿಚಾರಣೆ ಬಾಕಿ ಇಲ್ಲದ ದೊಡ್ಡ ಒತ್ತುವರಿಗಳನ್ನು ತೆರವು ಮಾಡಲು ಸೂಚಿಸಲಾಗಿರುತ್ತದೆ.
ಈ ಕಾರ್ಯಪಡೆ ಕಳೆದ ಒಂದು ತಿಂಗಳಲ್ಲಿ ಮಾಡಿರುವ ಒತ್ತುವರಿ ತೆರವಿನ ವಲಯವಾರು ವಿವರಗಳನ್ನು ಚಿತ್ರ ಸಹಿತ ಈ ಕಚೇರಿಗೆ ಕೂಡಲೇ ಸಲ್ಲಿಸಲು ಸೂಚಿಸಿದೆ ಎಂದಿದ್ದಾರೆ. ಮುಂದುವರಿದು, 2015ರಲ್ಲಿ ಕರ್ನಾಟಕ ಸರ್ಕಾರದ ನಡವಳಿಯಂತೆ “ದಿನಾಂಕ 27.04.1978ರ ಪೂರ್ವದ ಅರಣ್ಯ ಒತ್ತುವರಿಗಳನ್ನು ಸಕ್ರಮಗೊಳಿಸಲು 1996ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆಗಳಲ್ಲಿ ಕೈಬಿಟ್ಟುಹೋಗಿರುವ ಅರ್ಹ ಪ್ರಕರಣಗಳನ್ನು ಅರಣ್ಯ (ಸಂರಕ್ಷಣಾ ಕಾಯಿದೆ 1980ರಡಿಯಲ್ಲಿ ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಹಾಗೂ ಅರಣ್ಯ ಒತ್ತುವರಿ ಮತ್ತು ಒತ್ತುವರಿದಾರನ ಪಟ್ಟಾ ಜಮೀನು ಸೇರಿ ಮೂರು ಎಕರೆಗಿಂತ ಕಡಿಮೆ ಇರುವ ಒತ್ತುವರಿದಾರರನ್ನು ಒಕ್ಕಲೆಬ್ಬಿಸಬಾರದು ಎಂಬ ಆದೇಶಕ್ಕೆ ಒಳಪಟ್ಟು ಹಾಗೂ ಅನುಸೂಚಿತ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕು ಮಾನ್ಯ ಮಾಡುವ ಅಧಿನಿಯಮ)2006ರ ಮತ್ತು 2008ರ ನಿಯಮಗಳ ಕಲಂ 5ರನ್ವಯ ಯಾರೇ ಅರಣ್ಯವಾಸಿ ಅನುಸೂಚಿತ ಬುಡಕಟ್ಟಿನ ವ್ಯಕ್ತಿ ಅಥವಾ ಇತರೆ ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಹಾಕಿದ್ದಲ್ಲಿ ಅದು ಸುಪ್ರೀಂಕೋರ್ಟ್ ಆದೇಶದನ್ವಯ ಪುನರ್ ಪರಿಶೀಲನೆಗೆ ಬಾಕಿ ಇಲ್ಲದ ಪ್ರಕರಣಗಳನ್ನು ಖಾತ್ರಿ ಪಡಿಸಿಕೊಂಡು ಅರಣ್ಯ ಒತ್ತುವರಿಯನ್ನು ಈ ಕೆಳಕಂಡ ಆದ್ಯತೆಯಲ್ಲಿ ತೆರವು ಮಾಡುವುದು ಎಂದು ತಿಳಿಸಿದ್ದಾರೆ. ಅರಣ್ಯ ಜಮೀನು ಒತ್ತುವರಿ ಮಾಡಿ ನಿರ್ಮಿಸಿರುವ ರೆಸಾರ್ಟ್, ಹೋಂ ಸ್ಟೇ. 30 ಎಕರೆಗಿಂತ ಹೆಚ್ಚಿನ ವಿಸ್ತೀರ್ಣದ ಅರಣ್ಯ ಭೂಮಿ ಒತ್ತುವರಿ. 10ರಿಂದ 30 ಎಕರೆವರೆಗಿನ ಅರಣ್ಯ ಭೂಮಿ ಒತ್ತುವರಿ 03 ರಿಂದ 10 ಎಕರೆವರೆಗಿನ ಅರಣ್ಯ ಭೂಮಿ ಒತ್ತುವರಿ 64 ಎ ಪ್ರಕ್ರಿಯೆ ಬಾಕಿ ಇದ್ದಲ್ಲಿ ಅಥವಾ ನ್ಯಾಯಾಲಯಗಳಲ್ಲಿ ಪ್ರಕರಣ ಬಾಕಿ ಇದ್ದಲ್ಲಿ ಇವುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಂಡು ಒತ್ತುವರಿ ತೆರವು ಮಾಡಲು ಸೂಕ್ತ ಕ್ರಮವಹಿಸುವಂತೆ ಸೂಚಿಸಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.