ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಸಿಎಂ ಕ್ರಮ

ಬೆಂಗಳೂರು: ಹೋರಾಟಗಾರರ ಮೇಲಿನ ಪ್ರಕರಣಗಳ ಕಡತವನ್ನು ಸಚಿವ ಸಂಪುಟ ಉಪ ಸಮಿತಿಯ ಮುಂದೆ ತಂದು ಅಗತ್ಯ ಕ್ರಮ ಕೈಗೊಂಡು, ಕ್ಯಾಬಿನೆಟ್ ಮುಂದೆ ತರುವಂತೆ ಗೃಹ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಕಾವೇರಿ, ಮೇಕೆದಾಟು ಪಾದಯಾತ್ರೆ ಸೇರಿದಂತೆ ನಾಡಿನ ಹಿತರಕ್ಷಣೆಗಾಗಿ ನಡೆದಿದ್ದ ಹೋರಾಟಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ವಾಪಸ್ ಪಡೆಯುವಂತೆ ಪತ್ರ ಬರೆದಿದ್ದ ಶಾಸಕ ದಿನೇಶ್ ಗೂಳಿಗೌಡ ಅವರು ಮಾಡಿದ್ದ ಮನವಿಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.

ಪ್ರಕರಣಗಳನ್ನು ಹಿಂಪಡೆಯುವ ವಿಚಾರವಾಗಿ ಸಚಿವ ಸಂಪುಟ ಉಪ ಸಮಿತಿಯ ಮುಂದೆ ಕಡತ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕ್ಯಾಬಿನೆಟ್ ಮುಂದೆ ತರಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

Advertisement

ದಿನೇಶ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈಬಿಡುವಂತೆ ಕ್ರಮ ವಹಿಸಲು ಮನವಿ ಸಲ್ಲಿಸಿದ್ದರು.

ಈ ಹಿಂದೆ ನಡೆದ ನಾಡಿನ ನೆಲ-ಜಲ ಮತ್ತು ಭಾಷೆಯ ಹಿತರಕ್ಷಣೆಗಾಗಿ ಹಲವಾರು ಹೋರಾಟಗಳು ನಡೆದಿದ್ದವು.ಅಂಥ ಹೋರಾಟಗಳಲ್ಲಿ ಜನಪ್ರತಿನಿಧಿಗಳು, ಹಿರಿಯ ರಾಜಕಾರಣಿಗಳು, ಕನ್ನಡಪರ ಹೋರಾಟಗಾರರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಾವೇರಿ ನೀರಿಗೆ ಸಂಬಂಧಿಸಿದಂತೆ ಮೇಕೆದಾಟು ಹಾಗೂ ಇನ್ನಿತರೆ ವಿಷಯಗಳಿಗೆ ಸಾಕಷ್ಟು ಧರಣಿಗಳು, ಪ್ರತಿಭಟನೆಗಳು ಹಾಗೂ ಪಾದಯಾತ್ರೆಗಳು ನಡೆದಿದ್ದು, ಅಂದಿನ ಬಿಜೆಪಿ ಸರ್ಕಾರವು ಹೋರಾಟದ ಕಿಚ್ಚನ್ನು ನಿಯಂತ್ರಿಸಲು ಶಾಸಕರು, ಮಾಜಿ ಶಾಸಕರು, ಹಿರಿಯ ರಾಜಕಾರಣಿಗಳು, ಮುಖಂಡರುಗಳು, ರೈತ ಹೋರಾಟಗಾರರು, ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿತ್ತು. ಇದರಿಂದಾಗಿ ಹಲವಾರು ಜನ ಇಂದಿಗೂ ವಿನಾಕಾರಣ ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದು, ಹೀಗಾಗಿ ಪ್ರಕರಣದಲ್ಲಿರುವವರು ಸೇರಿದಂತೆ ಕುಟುಂಬದವರು ಇದರಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಪ್ರತಿಭಟನೆಗಳು, ಧರಣಿಗಳನ್ನು ನಡೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿದ್ದು, ಜನರ ಹಾಗೂ ನಾಡಿನ ಹಿತದೃಷ್ಟಿಯಿಂದ ಒಳ್ಳೆಯ ಉದ್ದೇಶಕ್ಕಾಗಿ ನಡೆಸುವ ಹೋರಾಟಗಳು ಹಾಗೂ ಪ್ರತಿಭಟನಾ ಮಾರ್ಗದ ಮೂಲಕ ಸರ್ಕಾರದ ಕಣ್ಣು ತೆರೆಸಿ ಜನೋಪಯೋಗಿ ಯೋಜನೆಗಳ ಹಾಗೂ ಕಾಮಗಾರಿಗಳ ಅನುಷ್ಠಾನಗೊಳಿಸುವ ಸಂಬಂಧ ಒತ್ತಡ ಹೇರಲು ಪಕ್ಷಾತೀತವಾಗಿ ಎಲ್ಲರೂ ಹೋರಾಟಗಳಲ್ಲಿ ಭಾಗಿಯಾಗಿರುತ್ತಾರೆ.
ಆದರೆ, ಇಂಥ ಸಂದರ್ಭದಲ್ಲಿ ಇವರ ಮೇಲೆ ಅಂದಿನ ಸರ್ಕಾರ ಪ್ರತಿಭಟನೆಗಳನ್ನು ಹತ್ತಿಕ್ಕಲು ರಾಜ್ಯದ ವಿವಿಧ ಪೋಲಿಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳನ್ನು ದಾಖಲು ಮಾಡಿದೆ.

ಆದುದರಿಂದ, ಇಂತಹ ಹಲವಾರು ಪ್ರಕರಣಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ತಂದು ಮರು ಪರಿಶೀಲನೆ ನಡೆಸಿ ದಾಖಲಾಗಿರುವ ಪ್ರಕರಣಗಳನ್ನು ಜರೂರಾಗಿ ಕೈಬಿಡಬೇಕು” ಎಂದು ದಿನೇಶ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದರು. ಈಗ ಸಿಎಂ ಸಿದ್ದರಾಮಯ್ಯ ಅವರು ಈ ಮನವಿಗೆ ಸ್ಪಂದಿಸಿದ್ದು, ಸಚಿವ ಸಂಪುಟ ಉಪ ಸಮಿತಿಯ ಮುಂದೆ ಈ ಎಲ್ಲ ಪ್ರಕರಣಗಳ ಕಡತ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳುವುದರ ಜತೆಗೆ ಸಚಿವ ಸಂಪುಟದ ಮುಂದೆ ತರಲು ಸೂಚಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement