ರಾಮನಗರ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆನ್‌ಲೈನ್ ವಂಚಕರ ವರ್ಕ್ ಫ್ರಂ ಹೋಂ ಜಾಲಕ್ಕೆ ಸಿಲುಕಿದ ಇಬ್ಬರು ಮಹಿಳೆಯರು ಬರೋಬ್ಬರಿ ₹20 ಲಕ್ಷ ಹಣ ಹೂಡಿಕೆ ಮಾಡಿ ಕಳೆದುಕೊಂಡಿದ್ದಾರೆ. ಈ ಕುರಿತು ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹16.55 ಲಕ್ಷ ವಂಚನೆ: ಕನಕಪುರ ತಾಲ್ಲೂಕಿನ ಶಾಲಿನಿ ಎಂಬ ಗೃಹಿಣಿ ವಂಚಕರ ಜಾಲಕ್ಕೆ ಸಿಲುಕಿ ₹16.55 ಲಕ್ಷ ಹಣ ಕಳೆದುಕೊಂಡಿದ್ದಾರೆ. ಡಿ. 10ರಂದು ಶಾಲಿನಿ ಅವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ್ದ ವಂಚಕರು, ವರ್ಕ್ ಫ್ರಂ ಕೆಲಸ ಮಾಡುತ್ತೀರಾ ಎಂದು ಕೇಳಿದ್ದರು. ಆದಕ್ಕೆ ಸಮ್ಮತಿ ಸೂಚಿಸಿದ್ದ ಶಾಲಿನಿ ಅವರಿಗೆ ವಾಟ್ಸ್‌ಆಯಪ್ ಮೂಲಕ ಲಿಂಕ್ ಕಳಿಸಿ, ಟೆಲಿಗ್ರಾಮ್ ಆಯಪ್‌ನ ಗ್ರೂಪ್‌ಗೆ ಸೇರಿಕೊಳ್ಳುವಂತೆ ಸೂಚಿಸಿದ್ದರು. ಗ್ರೂಪ್‌ಗೆ ಸೇರಿದ ಶಾಲಿನಿ ಅವರಿಗೆ ಗೂಗಲ್ ರಿವೀವ್ ಟಾಸ್ಕ್ ಪೂರ್ಣಗೊಳಿಸುವಂತೆ ಸೂಚಿಸಿ, ಒಂದು ರಿವೀವ್‌ಗೆ ₹40 ಪಾವತಿಸಲಾಗುತ್ತದೆ ಎಂದಿದ್ದಾರೆ.
ಅದರಂತೆ 6 ರಿವೀವ್ ಟಾಸ್ಕ್ ಮತ್ತು ಡೇಟಾ ಟಾಸ್ಕ್ ಪೂರ್ಣಗೊಳಿಸಿದರೆ ₹500 ಸಿಗಲಿದೆ ಎಂದು ಆಮಿಷ ತೋರಿಸಿದ್ದಾರೆ. ಪ್ರತಿ ಟಾಸ್ಕ್‌ಗೆ ₹1,010 ಹೂಡಿಕೆ ಮಾಡಿದರೆ ₹1,500 ಸಿಗಲಿದೆ ಎಂದಿದ್ದಾರೆ. ಅದರಂತೆ, ಆರಂಭದಲ್ಲಿ ಹೂಡಿಕೆ ಮಾಡಿದ ಶಾಲಿನಿ ಅವರಿಗೆ ಹೆಚ್ಚುವರಿ ಮೊತ್ತ ಬಂದಿದೆ. ನಂತರ ವಂಚಕರು ಹೆಚ್ಚು ಮೊತ್ತವನ್ನು ಹೂಡಿಕೆ ಮಾಡುವ ಟಾಸ್ಕ್ ಕೊಟ್ಟು, ಹೆಚ್ಚು ಕಮಿಷನ್ ಆಸೆ ತೋರಿಸಿದ್ದಾರೆ. ಇದೇ ರೀತಿ ವಂಚಕರು ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಡಿ. 16ರವರೆಗೆ ಒಟ್ಟು ₹16.55 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಕಡೆಗೆ ಅಸಲಿನ ಜೊತೆಗೆ ಕಮಿಷನ್ ಸಹ ಕೊಡದೆ ವಂಚಿಸಿದ್ದಾರೆ.
ಈ ಕುರಿತು ಶಾಲಿನಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ₹3.46 ಲಕ್ಷ ವಂಚನೆ: ವರ್ಕ್ ಫ್ರಂ ವಂಚಕರ ಜಾಲಕ್ಕೆ ಸಿಲುಕಿ ಚನ್ನಪಟ್ಟಣದ ಗೃಹಿಣಿ ಶಾಹಿದಾ ಬಾನು ಅವರು ₹3.46 ಲಕ್ಷ ಕಳೆದುಕೊಂಡಿದ್ದಾರೆ. ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಡಿ. 8ರಂದು ಕರೆ ಮಾಡಿದ ವಂಚಕರು, ವರ್ಕ್ ಫ್ರಂ ಹೋಂ ಕೆಲಸಕ್ಕೆ ಹೆಚ್ಚು ಕಮಿಷನ್ ನೀಡುವ ಆಮಿಷವೊಡ್ಡಿದ್ದಾರೆ.
ನಿಜ ಎಂದು ನಂಬಿದ ಶಾಹಿದಾ ಅವರು, ಆರೋಪಿಗಳು ಸೂಚಿಸಿದಂತೆ ಟೆಲಿಗ್ರಾಂ ಆಯಪ್‌ನಲ್ಲಿನ ಗ್ರೂಪ್ ಸೇರಿದ್ದಾರೆ. ಅಲ್ಲಿ ಗೂಗಲ್ ರಿವೀವ್ ಟಾಸ್ಕ್ ಕೊಟ್ಟು, ಕಮಿಷನ್ ಆಸೆ ತೋರಿಸಿದ್ದಾರೆ. ಅದರಂತೆ ಟಾಸ್ಕ್‌ಗೆ ಇಂತಿಷ್ಟು ಹಣ ಹೂಡಿಕೆ ಮಾಡುವಂತೆ ಸೂಚಿಸಿದ್ದಾರೆ. ಆರಂಭದಲ್ಲಿ ಹೂಡಿದ ಹಣಕ್ಕೆ ಸಿಕ್ಕ ಕಮಿಷನ್‌ನಿಂದ ಉತ್ತೇಜಿತರಾದ ಶಾಹಿದಾ, ವಂಚಕರು ಹೇಳಿದಂತೆ ಹೆಚ್ಚು ಮೊತ್ತ ಹೂಡಲಾರಂಭಿಸಿದ್ದಾರೆ. ಅದರಂತೆ ಹಂತಹಂತವಾಗಿ ಒಟ್ಟು ₹3.46 ಲಕ್ಷ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ.