ಲಕ್ನೋ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಳಮಳ ಮೂಡಿಸುವ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್‌ಗೆ ಸಂಕಟವೊಂದು ಎದುರಾಗಿದೆ. ಚುನಾವಣಾ ಪ್ರಚಾರದ ವೇಳೆ ಪಕ್ಷ ನೀಡಿದ ಭರವಸೆಯನ್ನು ಈಡೇರಿಸುವಂತೆ ಉತ್ತರ ಪ್ರದೇಶದ ಕಾಂಗ್ರೆಸ್ ಕಚೇರಿ ಎದುರು ಗ್ಯಾರೆಂಟಿ ಕಾರ್ಡ್‌ಗಾಗಿ ಅನೇಕ ಮಹಿಳೆಯರು ಸರದಿ ಸಾಲಿನಲ್ಲಿ ನಿಂತಿದ್ದಾರೆ.
ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಾರಿ ಕಾಂಗ್ರೆಸ್ ಗ್ಯಾರೆಂಟಿಗಳನ್ನು ಮುಂದಿಟ್ಟುಕೊಂಡು ಜನರ ಮತವನ್ನು ಕೇಳಿತ್ತು. ‘ಘರ್ ಘರ್ ಗ್ಯಾರಂಟಿ’ ಕಾರ್ಯಕ್ರಮವನ್ನು ಪ್ರಾರಂಭಿಸಿ, ಗ್ಯಾರೆಂಟಿ ಕಾರ್ಡ್ ಗಳನ್ನು ನೀಡುವುದಾಗಿ ಹೇಳಿತ್ತು. ಈ ಗ್ಯಾರೆಂಟಿಗಳಲ್ಲಿ ʼಮಹಾಲಕ್ಷ್ಮೀ ಯೋಜನೆʼಯನ್ನು ಜಾರಿಗೊಳಿಸುವುದಾಗಿ ಹೇಳಿತ್ತು. ಈ ಯೋಜನೆಯ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ವರ್ಗಕ್ಕೆ ಸೇರಿದ ಕುಟುಂಬದ ಮಹಿಳೆಗೆಯರ (ಮುಖ್ಯಸ್ಥೆ) ಖಾತೆಗೆ ತಿಂಗಳಿಗೆ 8,500 ರೂ.ಗಳನ್ನು ನೇರವಾಗಿ ಜಮಾ ಮಾಡಲಾಗುವುದು ಎಂದು ಪಕ್ಷವು ಭರವಸೆ ನೀಡಿತ್ತು. ಆ ಮೂಲಕ 1 ಲಕ್ಷ ರೂಪಾಯಿಯನ್ನು ಒಂದು ಕುಟುಂಬದ ಮಹಿಳೆಗೆ ನೀಡುವುದಾಗಿ ಹೇಳಿತ್ತು.
ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ ಕಚೇರಿ ಮುಂದೆ ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ಮಹಿಳೆಯರು ಗ್ಯಾರೆಂಟಿ ಕಾರ್ಡ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇವರಲ್ಲಿ ಕೆಲವು ಮಹಿಳೆಯರು ‘ಗ್ಯಾರಂಟಿ ಕಾರ್ಡ್’ಗೆ ಬೇಡಿಕೆ ಇಟ್ಟಿದ್ದಾರೆ. ಕೆಲವರು ತಾವು ಈ ಹಿಂದೆ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದೇವೆ. ಹಣ ಪಡೆಯಲು ವಿವರಗಳನ್ನು ನೀಡಿ ಆ ಬಳಿಕ ಕಾಂಗ್ರೆಸ್ ಕಚೇರಿಯಿಂದ ರಸೀದಿಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ.
ʼಇಂಡಿಯಾ ಬ್ಲಾಕ್ʼ ಅಧಿಕಾರಕ್ಕೆ ಬಂದರೆ ತಮ್ಮ ಖಾತೆಗಳಿಗೆ ಮಾಸಿಕ 8,500 ರೂಪಾಯಿ ನೀಡುತ್ತಾರೆ ಎಂದು ಹಲವಾರು ಮಹಿಳೆಯರು ಖಾತೆಗಳನ್ನು ತೆರೆಯಲು ಇತ್ತೀಚೆಗಷ್ಟೇ ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ ಕೇಂದ್ರದಲ್ಲಿ ಸಾಲಿನಲ್ಲಿ ನಿಂತಿದ್ದರು.