ಬ್ರೆಜಿಲ್: ದಕ್ಷಿಣ ಬ್ರೆಜಿಲ್‌ನ ಪ್ರವಾಸಿ ನಗರವಾದ ಗ್ರಾಮಡೊದಲ್ಲಿ 10 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವು ಅಂಗಡಿಗಳಿಗೆ ಅಪ್ಪಳಿಸಿದ್ದು, ಎಲ್ಲಾ 10 ಪ್ರಯಾಣಿಕರು ಮೃತಪಟ್ಟಿದ್ದಾರೆ.
ಈ ವೇಳೆ ಹೊತ್ತಿಕೊಂಡ ಬೆಂಕಿಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ನಿಯಂತ್ರಣ ಕಳೆದುಕೊಂಡ ವಿಮಾನವು ಹಲವು ಕಟ್ಟಡಗಳಿಗೆ ಡಿಕ್ಕಿ ಹೊಡೆದು ವ್ಯಾಪಕ ಹಾನಿಯನ್ನುಂಟುಮಾಡಿದೆ. ಈ ಘಟನೆಯಲ್ಲಿ 12 ಜನರು ಗಾಯಗೊಂಡಿದ್ದಾರೆ ಎಂದು ಬ್ರೆಜಿಲಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಕಟ್ಟಡಗಳಿಗೆ ಅಪ್ಪಳಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿರುವ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ವಿಮಾನವು ಸ್ಥಳೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಈ ಅಪಘಾತ ಸಂಭವಿಸಿದೆ ಎಂದು ರಾಷ್ಟ್ರೀಯ ಸಿವಿಲ್ ಡಿಫೆನ್ಸ್ ಹೇಳಿದೆ. ವಿಮಾನವು ವಸತಿ ಗೃಹಕ್ಕೆ ಅಪ್ಪಳಿಸುವ ಮೊದಲು ಕಟ್ಟಡದ ಚಿಮಣಿಗೆ ಡಿಕ್ಕಿ ಹೊಡೆದು ನಂತರ ಪೀಠೋಪಕರಣ ಅಂಗಡಿಗೆ ಅಪ್ಪಳಿಸಿತು. ವಿಮಾನದಲ್ಲಿ ಯಾರೂ ಬದುಕುಳಿದಿರುವ ಸಾಧ್ಯತೆಗಳಿಲ್ಲ.
ಈ ಮೃತಪಟ್ಟವರು ಅಪಘತಾ ಸ್ಥಳದಲ್ಲಿದ್ದವರಾ ಅಥವಾ ವಿಮಾನದಲ್ಲಿದ್ದವರಾ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.