ಬೆಂಗಳೂರು: ಪೊಲೀಸರೇ ಡ್ರಗ್ ಪೆಡ್ಲರ್ಗಳೊಂದಿಗೆ ಕೈಜೋಡಿಸಿರುವ ಆಘಾತಕಾರಿ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಓರ್ವ ಇನ್‌ಸ್ಪೆಕ್ಟರ್ ಸಹಿತ 10 ಪೊಲೀಸರನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ.
ಆರೋಪಿಗಳ ಜೊತೆ ಸೇರಿ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದ, ಡ್ರಗ್ ಪೆಡ್ಲರ್ಸ್ ಜೊತೆಗೆ ನಂಟು ಆರೋಪದ ಮೇಲೆ ಬೆಂಗಳೂರಿನ ಚಾಮರಾಜಪೇಟೆ ಠಾಣೆಯ ಇನ್‌ಸ್ಪೆಕ್ಟರ್ ಟಿ.ಮಂಜಣ್ಣ ಸೇರಿ ಚಾಮರಾಜಪೇಟೆ ಮತ್ತು ಜೆಜೆ ನಗರ ಠಾಣೆಯ 10 ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಇತ್ತೀಚೆಗೆ ಆರ್ಆರ್ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ಮಾಡಿ ಟೈಡಲ್ ಟ್ಯಾಬ್ಲೆಟ್ ಪೆಡ್ಲಿಂಗ್ ಕೇಸ್ನಲ್ಲಿ ಸಲ್ಮಾನ್ ಅಲಿಯಾಸ್ ಪಾಪ, ಸಲ್ಮಾನ್ ಅಲಿಯಾಸ್ ಪುಟಾಟ್, ನಯಾಜ್, ನವಾಜ್ ರೇಷ್ಮಾ ಎಂಬುವರು ಸೇರಿ ಆರು ಆರೋಪಿಗಳನ್ನ ಬಂಧಿಸಿದ್ದರು. ಬಂಧಿತರಿಂದ 4 ಲಕ್ಷ ರೂ. ನಗದು ಹಾಗೂ ನಾಲ್ಕು ಲಕ್ಷ ರೂ. ಮೌಲ್ಯ 1000 ಟೈಡಾಲ್ ಮಾತ್ರೆಗಳನ್ನು ಸೀಜ್ ಮಾಡಿದ್ದರು.
ಪೊಲೀಸರೇ ಇವರಿಗೆ ಶ್ರೀರಕ್ಷೆ ಆಗಿದ್ದರು ಎನ್ನುವ ಶಾಕಿಂಗ್ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳು ಚಾಮರಾಜಪೇಟೆ ಮತ್ತು ಜೆಜೆ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟೈಡಾಲ್ ಪೆಡ್ಲಿಂಗ್ ಮಾಡಲು ಪೊಲೀಸರಿಗೆ ಒಬ್ಬೊಬ್ಬರು 1 ರಿಂದ 1.5 ಲಕ್ಷ ರೂ ಪ್ರತಿ ತಿಂಗಳು ಕಮಿಷನ್ ಕೊಡುತ್ತಿದ್ದರು ಅನ್ನೋದು ಗೊತ್ತಾಗಿದೆ.
ಪೊಲೀಸರು ಭಾಗಿಯಾಗಿರುವುದು ತಿಳಿದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಎಸಿಪಿ ಚಂದನ್ಗೆ ತನಿಖೆ ಜವಾಬ್ದಾರಿ ವಹಿಸಿದ್ದರು. ಎಸಿಪಿ ಚಂದನ್ ತನಿಖೆ ವೇಳೆ ಚಾಮರಾಜಪೇಟೆ ಪೇಟೆ ಇನ್ಸ್‌ಪೆಕ್ಟರ್ ಮಂಜಣ್ಣ, ಎಸ್ಬಿ ಕಾನ್‌ಸ್ಟೆಬಲ್ ಶಂಕರ್, ಪ್ರಸನ್ನ, ಶಿವರಾಜ್, ಆನಂದ್, ರಮೇಶ್ ಬಾನೋಂದ್, ಹಾಗೂ ಜೆಜೆ ಆರ್ ನಗರ ಠಾಣೆಯ ಕುಮಾರ್, ಆನಂದ, ಬಸವಣ್ಣ ಮತ್ತು ಮಹೇಶ್ ಎಂಬುವವರು ಭಾಗಿಯಾಗಿರುವುದು ಗೊತ್ತಾಗಿದೆ. ಇವರೇ ಪೆಡ್ಲಿಂಗ್ ಮಾಡುವುದಕ್ಕೆ ಸಹಾಯ ಮಾಡುತ್ತಿದ್ದು, ಜೊತೆಗೆ ಕೆಲ ಐಡಿಯಾಗಳನ್ನ ಕೊಟ್ಟಿದ್ದರು ಎಂದು ಪತ್ತೆಯಾಗಿತ್ತು.
ಡಿಸಿಪಿ 11 ಜನ ಪೊಲೀಸರನ್ನು ಅಮಾನತು ಮಾಡಲು ಶಿಫಾರಸ್ಸು ಮಾಡಿದ್ದರು. ಡಿಸಿಪಿ ವರದಿ ಆಧರಿಸಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅಮಾನತು ಮಾಡಿ ಆದೇಶಿಸಿದ್ದಾರೆ. ನಗರದ ಬೇರೆ ಬೇರೆ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಭಾಗಿಯಾಗಿರುವ ಶಂಕೆ ಇದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.