ನವದೆಹಲಿ: ಪೇಟಿಎಂ ನ ಮಾತೃಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಶನ್ಸ್ ಇತ್ತೀಚೆಗೆ 1000ಕ್ಕೂ ಅಧಿಕ ಉದ್ಯೋಗಿಗಳನ್ನು ಕೈಬಿಟ್ಟಿದೆ. ಹೀಗೆ ಲೇಆಫ್ ಮಾಡಲ್ಪಟ್ಟ ಉದ್ಯೋಗಿಗಳು ಕಂಪೆನಿಯ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಪೇಟಿಎಂನ ಒಟ್ಟು ಉದ್ಯೋಗಿಗಳ ಪೈಕಿ ಶೇ 10ರಷ್ಟು ಮಂದಿಯನ್ನು ಈ ಲೇಆಫ್ ಬಾಧಿಸಿದೆ. ಭದ್ರತೆಯಿಲ್ಲದ ಸಾಲಗಳ ಮೇಲೆ ಆರ್‌ಬಿಐ ನಿರ್ಬಂಧಗಳ ಹಿನ್ನೆಲೆಯಲ್ಲಿ ಪೇಟಿಎಂ ತನ್ನ ಗ್ರಾಹಕರಿಗೆ ಸಣ್ಣ ಸಾಲ ನೀಡಿಕೆ ಮತ್ತು ಈಗ ಖರೀದಿಸಿ ನಂತರ ಪಾವತಿಸಿ ವಿಭಾಗಗಳಿಂದ ಹಿಂದೆ ಸರಿದ ನಂತರದ ಬೆಳವಣಿಗೆ ಇದಾಗಿದೆ.
ಈ ವರ್ಷ ಭಾರತ ಮೂಲದ ಟೆಕ್ ಕಂಪೆನಿಯೊಂದು ಮಾಡಿದ ಅತ್ಯಂತ ದೊಡ್ಡ ಲೇಆಫ್ ಆಗಿದೆ. ಸಂಸ್ಥೆ ಪೇಟಿಎಂ ಪೋಸ್ಟ್‌ಪೇಯ್ಡ್‌ನಿಂದ ಹಿಂದೆ ಸರಿದ ಬೆನ್ನಲ್ಲೇ ಅದರ ಷೇರು ಬೆಲೆ ಶೇ20ರಷ್ಟು ಕುಸಿತ ಕಂಡಿದೆ.