ಬೆಂಗಳೂರು : ನಗರದ 39 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರನ್ನು ಒಂದು ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ ಸೈಬರ್ ವಂಚಕರು ಬರೋಬ್ಬರಿ 11.83 ಕೋಟಿ ರೂ.ಲೂಟಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ಡಿಜಿಟಲ್ ಅರೆಸ್ಟ್ ವಂಚನೆಯಲ್ಲಿ ಅತ್ಯಧಿಕ ಮೊತ್ತ ಕಳೆದುಕೊಂಡ ದೇಶದ ಮೊದಲ ಪ್ರಕರಣ ಇದಾಗಿದೆ. ಈ ಕುರಿತು ಸಂತ್ರಸ್ತ ಟೆಕ್ಕಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಈಶಾನ್ಯ ವಿಭಾಗದ ಸೈಬರ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ವಿಜಯ್ಕುಮಾರ್ ಎಂಬವರಿಗೆ ನ.11ರಂದು ಬೆಳಗ್ಗೆ 10.30ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮೂರು ಪ್ರತ್ಯೇಕ ನಂಬರ್ಗಳಿಂದ ಕರೆ ಮಾಡಿ, ತನ್ನನ್ನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮ್ಮ ಆಧಾರ್ ಕಾರ್ಡ್ನಲ್ಲಿರುವ ಮೊಬೈಲ್ ನಂಬರ್ನಿಂದ ಕಾನೂನುಬಾಹಿರ ಜಾಹೀರಾತು ಹಾಗೂ ಸಂದೇಶಗಳು ರವಾನೆಯಾಗಿದ್ದು, ಆ ಸಂಖ್ಯೆಯನ್ನು ಬ್ಲಾಕ್ ಮಾಡಲಾಗುತ್ತಿದೆ. ಜೊತೆಗೆ ಮುಂಬಯಿಯ ಕೊಲಾಬ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಎದುರಿಸಿ ಎಂದು ಹೆದರಿಸಿದ್ದಾನೆ.
ಆನಂತರ ಮತ್ತೊಬ್ಬ ಅಪರಿಚಿತ ಕರೆ ಮಾಡಿ ಸ್ಕೈಪ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದು, ಅದರಂತೆ ವಿಜಯ್ಕುಮಾರ್ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಬಳಿಕ ಪೊಲೀಸ್ ದಿರಿಸಿನಲ್ಲಿದ್ದ ವ್ಯಕ್ತಿ ವಿಡಿಯೋ ಕರೆ ಮಾಡಿ, ತಾನು ಮುಂಬಯಿ ಪೊಲೀಸ್ ಎಂದು ಹೇಳಿಕೊಂಡು ಉದ್ಯಮಿ ನರೇಶ್ ಗೋಯಲ್ ಎಂಬುವವರು ನಿಮ್ಮ ಆಧಾರ್ ಕಾರ್ಡ್ ಬಳಸಿ ಕೆನರಾ ಬ್ಯಾಂಕ್ನಲ್ಲಿ ಖಾತೆ ತೆರೆದು 6 ಕೋಟಿ ರೂ. ವಹಿವಾಟು ನಡೆಸಿದ್ದಾರೆ. ಹೀಗಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಜಿಟಲ್ ಅರೆಸ್ಟ್ ಮಾಡುತ್ತಿರುವುದಾಗಿ ಬೆದರಿಸಿದ್ದಾನೆ. ಜತೆಗೆ ಈ ಪ್ರಕರಣದ ತನಿಖೆ ಕುರಿತಂತೆ ಯಾರಿಗೂ ಮಾಹಿತಿ ನೀಡಬಾರದೆಂದು ಸೂಚಿಸಿದ್ದಾನೆ.
ನ.25ರಂದು ಪುನಃ ಸ್ಕೈಪ್ ಕರೆ ಮೂಲಕ ಮಾತನಾಡಿದ ನಕಲಿ ಪೊಲೀಸ್ ಅಧಿಕಾರಿ ನಿಮ್ಮ ವಿರುದ್ಧದ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಪೂರ್ಣವಾಗಬೇಕಿದ್ದು. ನಾವು ಹೇಳಿದಂತೆ ಕೇಳದಿದ್ದರೆ ನಿಮ್ಮ ಕುಟುಂಬ ಸದಸ್ಯರನ್ನು ಬಂಧಿಸುತ್ತೇವೆ ಎಂದು ಹೆದರಿಸಿದ್ದಾನೆ. ತನಿಖೆ ಸಲುವಾಗಿ ನಿಮ್ಮ ಬ್ಯಾಂಕ್ ಖಾತೆ ಪರಿಶೀಲಿಸಬೇಕಿದ್ದು ಹಣ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾನೆ.
ಬಂಧನ ಭೀತಿಯಿಂದ ಹೆದರಿದ ವಿಜಯ್ಕುಮಾರ್ ಮೊದಲ ಬಾರಿಗೆ ವಂಚಕರು ನೀಡಿದ್ದ ಬ್ಯಾಂಕ್ ಖಾತೆಗೆ 75 ಲಕ್ಷ ರೂ., ಬಳಿಕ ಮತ್ತೊಂದು ಖಾತೆಗೆ 3.41 ಕೋಟಿ ರೂ. ವರ್ಗಾಯಿಸಿದ್ದಾರೆ. ಇದೇ ರೀತಿ ಡಿ.12ರವರೆಗೂ ಪ್ರತಿನಿತ್ಯ ವಿಜಯ್ಕುಮಾರ್ಗೆ ಕರೆ ಮಾಡಿ ಬಂಧಿಸುವ ಬೆದರಿಕೆಯೊಡ್ಡಿ ಒಟ್ಟು 11,83,55,648 ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಬ್ಯಾಂಕ್ ಖಾತೆಯಲ್ಲಿದ್ದ ಹಣ ಖಾಲಿಯಾದ ಬಳಿಕವೂ ವಂಚಕರ ಕಿರುಕುಳ ಮುಂದುವರಿದಿದೆ. ಬಳಿಕ ಇದು ಸೈಬರ್ ವಂಚಕರ ಕೃತ್ಯವೆಂಬುದು ಅರಿವಾಗಿದ್ದು, ಅದೇ ದಿನ ಠಾಣೆಗೆ ಭೇಟಿ ನೀಡಿ ದೂರು ನೀಡಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ವಂಚಕರು ಏಳು ಪ್ರತ್ಯೇಕ ಬ್ಯಾಂಕ್ ಖಾತೆಗಳಿಗೆ ದೂರುದಾರರಿಂದ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹಣದ ವಹಿವಾಟು ನಡೆದ ಖಾತೆಗಳ ವಿವರ ಸಂಗ್ರಹಿಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ.