ಜೈಪುರ: ಇಲ್ಲೊಂದು ಸಂದರ್ಶನವಿತ್ತು ಸುಮಾರು 1,900 ಯುವಕರು ಸಾಲುಗಟ್ಟಿ ನಿಂತಿದ್ದರು. ಆದರೆ ಇವರು ಹೇಳಬೇಕಿದ್ದದ್ದು ಕೇವಲ ಎರಡೇ ಪದ ಅದುವೇ ಕಾಬೂಲ್ ಹೈ… ಅರೆ ಇದೇನಿದು ವಿಚಿತ್ರ ಸಂದರ್ಶನ ಅಂದುಕೊಂಡಿರಾ? ಇದು ಯಾವುದೇ ಉದ್ಯೋಗಕ್ಕಾಗಿ ನಡೆಯುತ್ತಿದ್ದ ಸಂದರ್ಶನವಲ್ಲ. ಇದು ಮದುವೆಗಾಗಿ ನಡೆಯುತ್ತಿದ್ದ ಸಂದರ್ಶನ ಕೇವಲ 11 ಯುವತಿಯರಿಗಾಗಿ 1,900 ಯುವಕರು ಸಾಲುಗಟ್ಟಿ ನಿಂತು ಸಂದರ್ಶನವನ್ನು ಎದುರಿಸಿದರು. ಇಂತಹ ಒಂದು ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜ್ಯ ಸರ್ಕಾರದ ಮಹಿಳಾ ಸದನಗಳ ಉಪಕ್ರಮದಡಿಯಲ್ಲಿ ಇದನ್ನು ಆಯೋಜಿಸಲಾಗಿತ್ತು.
ರಾಜಸ್ಥಾನದಲ್ಲಿ ಒಂದು ವಿಶಿಷ್ಟ ಮತ್ತು ಆಸಕ್ತಿದಾಯಕ ವಿವಾಹ ವ್ಯವಸ್ಥೆ ಕಾರ್ಯಕ್ರಮದಲ್ಲಿ ಸುಮಾರು 1,900 ಯುವಕರು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದರು. ಕೇವಲ 11 ಯುವತಿಯರಿಗಾಗಿ ಸುಮಾರು 1,900 ಯುವಕರು ಸಾಲುಗಟ್ಟಿ ನಿಂತ ಸಂದರ್ಶನ ಎದುರಿಸಿದರು. ಅದರಲ್ಲಿ ಆಯ್ಕೆಯಾದವರಿಗೆ ಯುವತಿಯರನ್ನು ಕೊಟ್ಟು ಮದುವೆ ಮಾಡಲು ದಿನ ನಿಗದಿ ಪಡಿಸಲಾಯಿತು.
ರಾಜಸ್ಥಾನ ರಾಜ್ಯ ಸರ್ಕಾರದ ಮಹಿಳಾ ಸದನಗಳ ಉಪಕ್ರಮದ ಅಡಿಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಿರ್ಲಕ್ಷಿತ, ತುಳಿತಕ್ಕೊಳಗಾದ ಮತ್ತು ಅಸಹಾಯಕ ಯುವತಿಯರಿಗೆ ಹೊಸ ಜೀವನ ಕಲ್ಪಿಸಲು ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇವರನ್ನು ಮದುವೆಯಾಗಲು ಮೊದಲಿಗೆ ಅರ್ಜಿ ಸಲ್ಲಿಸಲು ಕೇಳಲಾಗಿತ್ತು. ಬಳಿಕ ಸಂದರ್ಶನ ಆಯೋಜಿಸಲಾಗಿತ್ತು. ಸಂದರ್ಶನದ ಸುತ್ತಿಗೆ ಜೈಪುರ, ದಿಡ್ವಾನಾ, ಜುನ್ಜುನು, ಕೋಟಾ ಮತ್ತು ಬರಾನ್‌ನ ಸುಮಾರು 1,900 ಕ್ಕೂ ಹೆಚ್ಚು ಯುವಕರು ತಮ್ಮ ದಾಖಲೆಗಳೊಂದಿಗೆ ಆಗಮಿಸಿದರು. ಎಲ್ಲ ಕುಟುಂಬಗಳ ಹಿನ್ನೆಲೆ, ಯುವಕರ ಕುರಿತು ತನಿಖೆ ನಡೆಸಿ, ಉದ್ಯೋಗ, ಆದಾಯವನ್ನು ಪರಿಶೀಲಿಸಿದ ಬಳಿಕ 11 ಯುವಕರೊಂದಿಗೆ ಯುವತಿಯರಿಗೆ ವಿವಾಹ ಜೋಡಿಗಳನ್ನು ರಚಿಸಲಾಯಿತು.