ದೆಹಲಿ : ಮುಂಬರುವ ‘ಮಹಾ ಕುಂಭ ಮೇಳ’ವನ್ನು ಏಕತೆಯ ಮಹಾಕುಂಭ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ಸಮಾಜದಿಂದ ದ್ವೇಷ ಮತ್ತು ವಿಭಜನೆಯನ್ನು ತೊಡೆದುಹಾಕುವ ಸಂಕಲ್ಪದೊಂದಿಗೆ ಭವ್ಯವಾದ ಧಾರ್ಮಿಕ ಸಭೆಯಿಂದ ಹಿಂತಿರುಗಿ ಎಂದು ಜನರಿಗೆ ಭಾನುವಾರ ಮನವಿ ಮಾಡಿದ್ದಾರೆ.ತಮ್ಮ ಮಾಸಿಕ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ 117ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ‘ಮಹಾಕುಂಭ್ ಕಾ ಸಂದೇಶ್ ಏಕ್ ಹೋ ಪೂರಾ ದೇಶ್ (ಇಡೀ ದೇಶವನ್ನು ಒಗ್ಗೂಡಿಸುವುದು ಮಹಾ ಕುಂಭದ ಸಂದೇಶ ಆಗಿರುಬೇಕು)’. ಜನವರಿ 13 ರಿಂದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭ ಮೇಳಕ್ಕೆ ಭೇಟಿ ನೀಡುವ ವಿವಿಧ ಜನರನ್ನು ಉಲ್ಲೇಖಿಸಿದ ಅವರು, ವಿವಿಧತೆಯಲ್ಲಿ ಏಕತೆಯನ್ನು ಸಾರುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಇಲ್ಲ ಎಂದು ಹೇಳಿದರು.
ಮುಂದಿನ ಗಣರಾಜ್ಯೋತ್ಸವವು ಸಂವಿಧಾನದ ಅನುಷ್ಠಾನದ 75ನೇ ವಾರ್ಷಿಕೋತ್ಸವ ಆಗಿದೆ. ಇದು ದೇಶವಾಸಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಸಂವಿಧಾನವು ಪ್ರತಿಯೊಂದು ಕಾಲಘಟ್ಟದಲ್ಲೂ ನಿಂತಿದೆ. ಇದು ನಮ್ಮ ಪಾಲಿಗೆ ಮಾರ್ಗದರ್ಶನ ನೀಡುವ ಬೆಳಕಾಗಿದೆ. ಸಂವಿಧಾನದಿಂದಲೇ ತಾನು ಇಂದು ಈ ಸ್ಥಾನಕ್ಕೆ ತಲುಪಲು ಸಾಧ್ಯವಾಯಿತು. ಸಂವಿಧಾನದ ಪರಂಪರೆಯೊಂದಿಗೆ ದೇಶದ ನಾಗರಿಕರನ್ನು ಸಂಪರ್ಕಿಸಲು constitution75.com ಹೆಸರಿನ ವಿಶೇಷ ವೆಬ್‌ಸೈಟ್ ಅನ್ನು ಸಹ ರಚಿಸಲಾಗಿದೆ ಎಂದು ಹೇಳಿದರು. ಇದರಲ್ಲಿ ನೀವು ಸಂವಿಧಾನದ ಪೀಠಿಕೆಯನ್ನು ಓದಿದ ನಂತರ ನಿಮ್ಮ ವೀಡಿಯೊವನ್ನು ಅಪ್‌ಲೋಡ್ ಮಾಡಬಹುದು. ವಿವಿಧ ಭಾಷೆಗಳಲ್ಲಿ ಸಂವಿಧಾನವನ್ನು ಓದಬಹುದು, ಸಂವಿಧಾನದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು ಎಂದರು.
ಮುಂದಿನ ವರ್ಷ ನಮ್ಮ ದೇಶದಲ್ಲಿ ಮೊದಲ ಬಾರಿಗೆ ವಿಶ್ವ ಆಡಿಯೋ ವಿಷುಯಲ್ ಎಂಟರ್‌ಟೈನ್‌ಮೆಂಟ್ ಶೃಂಗಸಭೆ ನಡೆಯಲಿದೆ. ಈ ವೆಬ್ ಶೃಂಗಸಭೆಯಲ್ಲಿ ಪ್ರಪಂಚದಾದ್ಯಂತದ ಮಾಧ್ಯಮ ಮತ್ತು ಮನರಂಜನಾ ದಿಗ್ಗಜರು ಭಾಗವಹಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.