Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

12ರ ನಂತರ ತಮಿಳುನಾಡಿಗೆ ನೀರು ಬಿಡಲ್ಲ; ಸುಪ್ರೀಂಕೋರ್ಟ್‌ಗೆ ಕರ್ನಾಟಕ ಪ್ರಮಾಣಪತ್ರ

0

ನವದೆಹಲಿ: ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳೆರಡೂ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದ್ದು, 2023ರ ಸೆಪ್ಟೆಂಬರ್ 12ರ ನಂತರ ತಮಿಳುನಾಡಿಗೆ ಕಾವೇರಿ ಜಲಾನಯನ ಪ್ರದೇಶದಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿರುವ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌, ‘ಆಗಸ್ಟ್‌ 29ರಿಂದ ಸೆಪ್ಟೆಂಬರ್‌ 11ರ ವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರನ್ನು ಬಿಡಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ನಿರ್ದೇಶನ ನೀಡಿತ್ತು. ಆ ಪ್ರಕಾರ, ಕರ್ನಾಟಕವು ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿದೆ. ನೀರು ಬಿಡುಗಡೆ ಪ್ರಮಾಣವನ್ನು ದಿನಕ್ಕೆ 5 ಸಾವಿರ ಕ್ಯೂಸೆಕ್‌ನಿಂದ 3 ಸಾವಿರ ಕ್ಯೂಸೆಕ್‌ಗೆ ಇಳಿಸಬೇಕು ಎಂದು ಆಗ್ರಹಿಸಿ ಪ್ರಾಧಿಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ’ ಎಂದೂ ತಿಳಿಸಿದ್ದಾರೆ.

ಪ್ರಾಧಿಕಾರದ ಆದೇಶದ ‍ಪ್ರಕಾರ, ಆಗಸ್ಟ್‌ 29ರಿಂದ ಸೆಪ್ಟೆಂಬರ್‌ 3 ರ ವರೆಗೆ 30 ಸಾವಿರ ಕ್ಯೂಸೆಕ್‌ ನೀರನ್ನು ಬಿಡಬೇಕಿತ್ತು. ಆದರೆ, ತಮಿಳುನಾಡಿಗೆ 37,869 ಕ್ಯೂಸೆಕ್‌ ನೀರನ್ನು ಬಿಡಲಾಗಿದೆ. ರಾಜ್ಯವು ಹೆಚ್ಚುವರಿಯಾಗಿ 7,869 ಕ್ಯೂಸೆಕ್‌ ನೀರನ್ನು ಬಿಟ್ಟಿದೆ. ಮುಂದಿನ ದಿನಗಳಲ್ಲಿ ನೀರಿನ ಬಿಡುಗಡೆ ಪ್ರಮಾಣವನ್ನು ಹೊಂದಾಣಿಕೆ ಮಾಡುವ ಅಧಿಕಾರವನ್ನು ರಾಜ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ.

‘ಕಾವೇರಿ ಕಣಿವೆಯಲ್ಲಿ ಶೇ 60.12ರಷ್ಟು ಮಳೆ ಕೊರತೆಯಾಗಿದೆ ಎಂದು ಪ್ರಾಧಿಕಾರ ಅಂದಾಜಿಸಿದೆ. ಆದರೆ, ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ 66ರಷ್ಟು ಮಳೆ ಕೊರತೆ ಆಗಿದೆ. ಇದರಿಂದಾಗಿ, ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಕಡಿಮೆ ಆಗಿದೆ. ರಾಜ್ಯದ ಕಾವೇರಿ ಹಾಗೂ ಕೃಷ್ಣಾ ಕಣಿವೆಗಳಲ್ಲಿ ಗಂಭೀರ ಬರ ಎದುರಾಗುವ ಸನ್ನಿವೇಶ ಇದೆ. ಇದರಿಂದಾಗಿ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ’ ಎಂದೂ ಅವರು ಉಲ್ಲೇಖಿಸಿದ್ದಾರೆ.

‘ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ಸದ್ಯ 56 ಟಿಎಂಸಿ ಅಡಿ ಮಾತ್ರ ನೀರು ಇದೆ. ಮುಂದಿನ ದಿನಗಳಲ್ಲಿ 40 ಟಿಎಂಸಿ ನೀರು ಜಲಾಶಯಗಳಿಗೆ ಹರಿದು ಬರಬಹುದು ಎಂದು ಅಂದಾಜಿಸಲಾಗಿದೆ. ಪಟ್ಟಣಗಳ ಹಾಗೂ ನಗರಗಳ ಕುಡಿಯುವ ನೀರು, ಬೆಳೆಗಳಿಗೆ ನೀರು ಹರಿಸಲು ರಾಜ್ಯಕ್ಕೆ 140 ಟಿಎಂಸಿ ಅಡಿಯಷ್ಟು ನೀರು ಬೇಕಾಗಿದೆ. ಈ ಸಂಬಂಧ ಪ್ರಾಧಿಕಾರಕ್ಕೆ ಆ‌ಗಸ್ಟ್‌ನಲ್ಲೇ ಪ್ರಮಾಣಪತ್ರ ಸಲ್ಲಿಸಲಾಗಿದೆ. ಹೀಗಾಗಿ, 12ರ ನಂತರ ನೀರು ಬಿಡುಗಡೆ ಕಾರ್ಯಸಾಧ್ಯ ಆಗದಿರಬಹುದು’ ಎಂದೂ ಅವರು ಹೇಳಿದ್ದಾರೆ.

Leave A Reply

Your email address will not be published.