ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಏಕದಿನ ವಿಶ್ವಕಪ್ ನೀಡಿದ ಅದ್ಭುತ ನಾಯಕ. ಮೂರು ಐಸಿಸಿ ಟ್ರೋಫಿಗಳನ್ನು ಸೇರಿಸುವ ಮೂಲಕ ಧೋನಿ ಇತಿಹಾಸ ಸೃಷ್ಟಿಸಿದ್ದಾರೆ. ಸದ್ಯ ಅವರ ಬಗ್ಗೆ ಬಿಸಿ ಚರ್ಚೆಯೊಂದು ಶುರುವಾಗಿದ್ದು, ವಂಚನೆ ಕೇಸ್ನಲ್ಲಿ ಧೋನಿಗೆ ಸಂಕಷ್ಟ ಎದುರಾಗಿದೆ. ಧೋನಿ ಮತ್ತು ಅವರ ಬಿಜಿನೆಸ್ ಪಾಲುದಾರ ಮಿಹಿರ್ ದಿವಾಕರ್ ನಡುವೆ ಈಗಾಗಲೇ ವಂಚನೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದೀಗ ಅದೇ ಪ್ರಕರಣದಲ್ಲಿ ಉತ್ತರ ಪ್ರದೇಶದ ನಿವಾಸಿ ರಾಜೇಶ್ ಕುಮಾರ್ ಮೌರ್ಯ ಎಂಬುವರು ದೂರು ದಾಖಲಿಸಿದ್ದಾರೆ. ಕ್ರಿಕೆಟ್ ಅಕಾಡೆಮಿ ನಿರ್ವಹಿಸುವ ವಿಚಾರದಲ್ಲಿ ಧೋನಿ 15 ಕೋಟಿ ರೂ. ವಂಚಿಸಿದ್ದಾರೆಂದು ಆಪಾದನೆ ಮಾಡಿದ್ದಾರೆ. ಬಿಸಿಸಿಐ ನಿಯಮ 39ರ ಪ್ರಕಾರ ಬಿಸಿಸಿಐ ಎಥಿಕ್ಸ್ ಕಮಿಟಿಲ್ಲಿ ಧೋನಿ ವಿರುದ್ಧ ದೂರು ದಾಖಲಿಸಲಾಗಿದೆ. ಆಗಸ್ಟ್ 30ರೊಳಗೆ ಈ ಬಗ್ಗೆ ವಿವರಣೆ ನೀಡುವಂತೆ ಬಿಸಿಸಿಐ ಧೋನಿ ಅವರಿಗೆ ಸೂಚನೆ ನೀಡಿದೆ. ಧೋನಿ ಅವರು ಈಗಾಗಲೇ ಮಿಹಿರ್ ದಿವಾಕರ್ ಎಂಬುವರ ವಿರುದ್ಧ ರಾಂಚಿ ಸಿವಿಲ್ ಕೋರ್ಟ್ನಲ್ಲಿ ದೂರು ದಾಖಲಿಸಿದ್ದಾರೆ. ಮಾತ್ರವಲ್ಲದೆ, ಸೌಮ್ಯ ದಾಸ್ ಮತ್ತು ಅರ್ಕಾ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ವಿರುದ್ಧವೂ ವಂಚನೆ ಆರೋಪಗಳನ್ನು ಮಾಡಿದ್ದಾರೆ. ಅರ್ಕಾ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ 2021ರಲ್ಲಿ ಧೋನಿ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿಗಳನ್ನು ತೆರೆದಿದೆ. ಆದರೆ, ಧೋನಿ ಅವರಿಗೆ ಗೊತ್ತಿಲ್ಲದೆ ಅನೇಕ ಅಕಾಡೆಮಿಗಳನ್ನು ತೆರೆಯಲಾಗಿದೆ ಎಂದು ಧೋನಿ ಪರ ವಕೀಲರು ಆರೋಪ ಮಾಡಿದ್ದಾರೆ. ಅಲ್ಲದೆ, ಒಪ್ಪಂದದ ಪ್ರಕಾರ ಅರ್ಕಾ ಕಂಪನಿ ತನಗೆ ನೀಡಬೇಕಾದ ಹಣವನ್ನು ನೀಡಿಲ್ಲ ಎಂದು ಧೋನಿ ದೂರಿದ್ದಾರೆ. ರಾಂಚಿ ಸಿವಿಲ್ ಕೋರ್ಟ್ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದರೆ ಇದೀಗ ಅದೇ ಅರ್ಕಾ ಸಂಸ್ಥೆಗೆ ಸೇರಿದ ರಾಜೇಶ್ ಕುಮಾರ್ ತಮಗೆ ಧೋನಿ 15 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಬಿಸಿಸಿಐಗೆ ದೂರು ನೀಡಿದ್ದಾರೆ. ಇದೀಗ ಈ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಆರೋಪಕ್ಕೆ ಧೋನಿ ಯಾವ ರೀತಿಯಲ್ಲಿ ಉತ್ತರ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
