ನವದೆಹಲಿ : ಜಾರ್ಖಂಡ್ನಲ್ಲಿ ನಿಷೇಧಿತ ಸಿಪಿಐ ಸಂಘಟನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಆರೋಪದ ಮೇಲೆ ಪರಾರಿಯಾಗಿರುವ ಶಸ್ತ್ರಾಸ್ತ್ರ ವ್ಯಾಪಾರಿಗೆ ರಾಂಚಿಯ ವಿಶೇಷ ನ್ಯಾಯಾಲಯವು 15 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದಲ್ಲಿ ವಿವಿಧ ಆರೋಪಗಳಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿರುವ ಬಿಹಾರದ ಔರಂಗಾಬಾದ್ನ ಮಂಟು ಶರ್ಮಾಗೆ ಎನ್ಐಎ ವಿಶೇಷ ನ್ಯಾಯಾಲಯ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಮಂಟು ಶರ್ಮಾ ಸಿಪಿಐ ಸದಸ್ಯರಿಗೆ ಅಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸಿದ್ದಾನೆ. ಅವನನ್ನು ಬಂಧಿಸಲು ಎನ್ಐಎ ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2012ರ ಆಗಸ್ಟ್ನಲ್ಲಿ ರಾಜ್ಯದ ಸಿಲೋದರ್ ಅರಣ್ಯ ಪ್ರದೇಶದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಪಿಐನ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಪೂರೈಕೆ ಘಟಕದ ಮೇಲೆ ಜಾರ್ಖಂಡ್ ಪೊಲೀಸರು ದಾಳಿ ನಡೆಸಿದ್ದರು. ಬಳಿಕ ಎಎನ್ಐ ಈ ಪ್ರಕರಣದ ತನಿಖೆ ನಡೆಸುತ್ತಿತ್ತು.
ಪ್ರಕರಣ ಸಂಬಂಧ ಪ್ರಫುಲ್ಲ ಕುಮಾರ್ ಮಾಲಾಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಅಮೆರಿಕ ನಿರ್ಮಿತ ಎಂ-16 ರೈಫಲ್, 14 ಸಜೀವ ಗುಂಡುಗಳು, ಎರಡು ಮೊಬೈಲ್ ಮತ್ತು ಒಂದು ಗುಂಡು ನಿರೋಧಕ ಜಾಕೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ವಕ್ತಾರರು ಹೇಳಿದ್ದರು.
ಮಾಲಾಕರ್ ವಿಚಾರಣೆಯ ನಡೆಯುತ್ತಿರುವ ವೇಳೆಯೇ ಮತ್ತೊಬ್ಬ ಆರೋಪಿ ಅನಿಲ್ ಕುಮಾರ್ ಯಾದವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತನಿಂದ ಒಂದು 9 ಎಂಎಂ ಪಿಸ್ತೂಲ್, ಸಜೀವ ಗುಂಡುಗಳು 9 ಲಕ್ಷ ರೂ. ನಗದು ಮತ್ತು ಎರಡು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಮಂಟು, ಯಾದವ್ ಮತ್ತು ಮಾಲಾಕರ್ ಜೊತೆ ನಿಕಟ ಸಂಪರ್ಕದಲ್ಲಿದ್ದ ಎಂದು ಎನ್ಐಎ ತಿಳಿಸಿದೆ.
2014 ಮತ್ತು 2017ರ ನಡುವೆ ಎನ್ಐಎ ಮಾಲಾಕರ್, ಯಾದವ್ ಮತ್ತು ಮಂಟು ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. 2024ರ ಡಿಸೆಂಬರ್ನಲ್ಲಿ ಎನ್ಐಎ ವಿಶೇಷ ನ್ಯಾಯಾಲಯವು ಮಾಲಾಕರ್ ಮತ್ತು ಯಾದವ್ ತಪ್ಪಿತಸ್ಥರೆಂದು ಘೋಷಿಸಿ 15 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಜೊತೆಗೆ ವಿಶೇಷ ನ್ಯಾಯಾಲಯವು ಇಂದು ಮಂಟುಗೆ 15 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆದರೆ ಆತ ಇನ್ನೂ ತಲೆಮರೆಸಿಕೊಂಡಿದ್ದಾನೆ.