ಬೆಂಗಳೂರು:ಇಲ್ಲೊಬ್ಬ ವ್ಯಕ್ತಿ ಲಕ್ಷಕ್ಕಿಂತಲೂ ಹೆಚ್ಚು ಸಂಬಳ ಬರೋ ಕೆಲಸ ಕಳೆದುಕೊಂಡ ಬಳಿಕ ಸುಲಭದಲ್ಲಿ ಹಣ ಮಾಡಬೇಕೆಂದು ಮ್ಯಾಟ್ರಿಮೋನಿ ಸೈಟ್ ಗಳಲ್ಲಿ ಮಹಿಳೆಯರನ್ನು ಬಲೆಗೆ ಬೀಳಿಸಿ ಹಣ ದೋಚುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ವಿಪ್ರೋ ಕಂಪೆನಿಯಲ್ಲಿ 1.37 ಲಕ್ಷ ಸಂಬಳ ಬರುವ ಕೆಲಸ ಮಾಡ್ತಿದ್ದ ರಾಹುಲ್ ಚತುರ್ವೇದಿ ಎಂಬ ಖತರ್ನಾಕ್ ಖಿಲಾಡಿ ಕೆಲಸ ಕಳೆದುಕೊಂಡ ಬಳಿಕ ಸುಲಭ ದಾರಿಯಲ್ಲಿ ಹಣ ಗಳಿಸಲು ಮ್ಯಾಟ್ರಿಮೋನಿ ಸೈಟ್ ಗಳಲ್ಲಿ ಖಾತೆ ತೆರೆದಿದ್ದಾನೆ. 35 ರ ಆಸುಪಾಸಿನ ವಯಸ್ಸಿನ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಅವರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ದೋಚುತ್ತಿದ್ದ. ಈವರೆಗೆ ಈತ ಮದುವೆಯಾಗುವುದಾಗಿ ನಂಬಿಸಿ ಸುಮಾರು 17 ಮಹಿಳೆಯರಿಗೆ ವಂಚನೆ ಮಾಡಿದ್ದಾನೆ ಎಂದು ವರದಿಯಾಗಿದೆ.
ವಂಚನೆಗೊಳಗಾದ ಮಹಿಳೆಯೊಬ್ಬಳು ದೂರು ನೀಡಿದ ಆಧಾರದ ಮೇಲೆ ಈ ಖದೀಮನನ್ನು ಬಂಧಿಸಲಾಗಿದೆ. 39 ವರ್ಷದ ರಾಹುಲ್ ಚತುರ್ವೇದಿ ವಿವಿಧ ಮ್ಯಾಟ್ರಿಮೋನಿ ವೆಬ್ಸೈಟ್ ಗಳಲ್ಲಿ ನಕಲಿ ಖಾತೆಯನ್ನು ತೆರೆದು ಸುಮಾರು 35 ರ ಆಸುಪಾಸಿನ ಮಹಿಳೆಯರನ್ನು ಟಾರ್ಗೆಟ್ ಮಾಡಿ ಬಲೆಗೆ ಬೀಳಸಿ ಮದುವೆಯಾಗುತ್ತೇನೆಂದು ನಂಬಿಸಿ ಸ್ನೇಹ ಬೆಳೆಸಿ ಕೊನೆಗೆ ವಿವಿಧ ಆಮಿಷವೊಡ್ಡಿ ಆ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದ ಎಂಬುವುದಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.