ಬೆಂಗಳೂರು : ಬೆಂಗಳೂರಿನ ಐತಿಹಾಸಿಕ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಗ್ರೀನ್ ಸಿಗ್ನಲ್ ದೊರೆತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಘಟನೆಯ ನಂತರ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಇದೀಗ ಬೆಂಗಳೂರು ಪೊಲೀಸರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (KSCA) ಕಟ್ಟುನಿಟ್ಟಾದ 17 ಅಂಶಗಳ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಲು ಸಜ್ಜಾಗಿದ್ದಾರೆ.
ಗೃಹ ಇಲಾಖೆ ಸಿದ್ಧಪಡಿಸಿರುವ ಈ ಷರತ್ತುಗಳ ಕುರಿತು ಕೆಎಸ್ಸಿಎ ಪದಾಧಿಕಾರಿಗಳು ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ತಂಡ ಗೃಹ ಸಚಿವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಲಿದೆ. ಪೊಲೀಸ್ ಕಮಿಷನರ್ ಅವರು ನ್ಯಾ. ಮೈಕಲ್ ಡಿ ಕುನ್ಹಾ ಸಮಿತಿ ವರದಿಯ ಶಿಫಾರಸುಗಳನ್ನು ಆಧರಿಸಿ, ಕಾಲ್ತುಳಿತದಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಈ 17 ಷರತ್ತುಗಳನ್ನು ವಿಧಿಸಿದ್ದಾರೆ. ಕೆಎಸ್ಸಿಎ ಈ ಷರತ್ತುಗಳನ್ನು ಈಡೇರಿಸಿದ ತಕ್ಷಣವೇ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಲಾಗುವುದು ಎಂದು ತಿಳಿದುಬಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ವೇಳೆಗೆ ಎಲ್ಲವರೂ ಸರಿಯಾಗುವ ನಿರೀಕ್ಷೆ ಇದೆ.
ಮಾರ್ಗಸೂಚಿಗಳಲ್ಲಿನ ಪ್ರಮುಖ ಅಂಶಗಳೆಂದರೆ, ಸ್ಟೇಡಿಯಂ ಒಳಗೆ ಮತ್ತು ಹೊರಗೆ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಗಳ ಸುಧಾರಣೆ. ಪ್ರಸ್ತುತ, ಟಿಕೆಟ್ ವಿತರಣೆ ಮತ್ತು ಪ್ರೇಕ್ಷಕರ ಕ್ಯೂಗಳು ಫುಟ್ಪಾತ್ಗಳ ಮೇಲೆ ನಡೆಯುತ್ತಿದ್ದು, ಇದು ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ತೀವ್ರ ತೊಂದರೆ ಉಂಟುಮಾಡುತ್ತದೆ. ಇದನ್ನು ತಪ್ಪಿಸಲು ಪ್ರತ್ಯೇಕ ಸ್ಥಳಗಳನ್ನು ಗುರುತಿಸಬೇಕು. ಸಾರ್ವಜನಿಕರ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು. ಹಾಗೆಯೇ, ಸ್ಟೇಡಿಯಂನ ಎಲ್ಲಾ ಗೇಟ್ಗಳನ್ನು ಕನಿಷ್ಠ ಆರು ಅಡಿ ಅಗಲಕ್ಕೆ ವಿಸ್ತರಿಸಬೇಕು. ಸದ್ಯದ ಕಿಕ್ಕಿರಿದ ಗೇಟ್ಗಳು ಮತ್ತು ಅಸಮವಾದ ಪ್ರವೇಶ ಮಾರ್ಗಗಳು ಅಪಾಯವನ್ನುಂಟುಮಾಡುತ್ತವೆ. ಇದಲ್ಲದೆ, ಅಗ್ನಿಶಾಮಕ ಸುರಕ್ಷತೆಗಾಗಿ ಪ್ರತ್ಯೇಕ ನಿರ್ಗಮನ ದ್ವಾರಗಳನ್ನು ಕಡ್ಡಾಯಗೊಳಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಸ್ಟೇಡಿಯಂ ಒಳಗೆ ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸಬೇಕು. ಸ್ಟೇಡಿಯಂ ಒಳಗೆ ಪ್ರವೇಶಿಸುವ ಪ್ರೇಕ್ಷಕರ ನೈಜ-ಸಮಯದ ಸಂಖ್ಯೆಯನ್ನು (ರಿಯಲ್ ಟೈಮ್ ಕೌಂಟ್) ನಿಖರವಾಗಿ ಇಟ್ಟುಕೊಳ್ಳುವ ವ್ಯವಸ್ಥೆ ಜಾರಿಗೆ ತರಬೇಕು. ಟಿಕೆಟ್ಗಳನ್ನು ಸ್ಟೇಡಿಯಂ ಒಳಗೆ ವಿತರಿಸಲು ಪ್ರತ್ಯೇಕ ಸ್ಥಳಗಳನ್ನು ಗೊತ್ತುಪಡಿಸಬೇಕು. ಸ್ಟೇಡಿಯಂ ಸುತ್ತಲಿನ ಪಾರ್ಕಿಂಗ್, ಪಿಕ್ಅಪ್ ಮತ್ತು ಡ್ರಾಪ್ ವ್ಯವಸ್ಥೆಗಳನ್ನು ಸುಧಾರಿಸಬೇಕು.































