ಬೆಂಗಳೂರು : ಸ್ಪೀಕರ್ ಅವರು ನಮ್ಮ ಶಾಸಕರನ್ನು ಅಮಾನತು ಮಾಡಿ ರಾಜ್ಯ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. ಇದು ಖಂಡನೀಯ. 18 ಶಾಸಕರನ್ನು ಅಮಾನತು ಮಾಡುವ ಆದೇಶವನ್ನು ಸ್ಪೀಕರ್ ಅವರು ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸುವ ಕುರಿತ ನಿರ್ಧಾರವು ಸಂಪೂರ್ಣವಾಗಿ ಕಾನೂನುಬಾಹಿರ, ಅಸಾಂವಿಧಾನಾತ್ಮಕ, ಏಕಪಕ್ಷೀಯ ಹಾಗೂ ಮನಸೋಇಚ್ಛೆಯಿಂದ ತೆಗೆದುಕೊಂಡ ತೀರ್ಮಾನ ಎಂದು ಆಕ್ಷೇಪಿಸಿದರು. ಸ್ಪೀಕರ್ ಅವರು ಶಾಸಕರು ಮಾತ್ರವಲ್ಲ ಕ್ಷೇತ್ರದ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಅಲ್ಪಸಂಖ್ಯಾತರನ್ನು ಖುಷಿಪಡಿಸಲು ಮೀಸಲಾತಿ ಕೊಟ್ಟ ಸರ್ಕಾರದ ನಿರ್ಧಾರವನ್ನು ಬಿಜೆಪಿ ವಿರೋಧಿಸುತ್ತದೆ. ಸದನದ ಒಳಗೆ ಮತ್ತು ಹೊರಗೆ ಇದರ ವಿರುದ್ಧ ಹೋರಾಟ ನಡೆಸಿ ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ ಎಂದರು.