ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಹಾಗೂ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಸಹೋದರರು ಇದ್ದಂತೆ, ಒಂದೇ ನಾಣ್ಯದ ಎರಡು ಮುಖಗಳು ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ನರೇಂದ್ರ ಮೋದಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಅವರು ಒಂದೇ ಬಟ್ಟೆಯ ತುಂಡುಗಳು. ಇಬ್ಬರೂ ಆರ್ಎಸ್ಎಸ್ ಸಿದ್ಧಾಂತದಿಂದಲೇ ಪ್ರವರ್ಧಮಾನಕ್ಕೆ ಬಂದವರು. ಒಬ್ಬರು ಶಾಖೆಯಿಂದ ಬಂದವರು, ಇನ್ನೊಬ್ಬರು ಅದರ ಸಂಸ್ಥೆಗಳಿಂದ ಬಂದರು ಎಂದು ಟೀಕಿಸಿದ್ದಾರೆ.
ಅವರು ಓಕ್ಲಾ ವಿಧಾನಸಭೆ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಶಿಫ- ಉರ್ ರೆಹಮಾನ್ ಪರ ಪ್ರಚಾರ ನಡೆಸಿದ್ದಾರೆ. ಬಳಿಕ ಶಹೀನ್ಬಾಗ್ನಲ್ಲಿ ಪಾದಯಾತ್ರೆ ನಡೆಸಿದ ಓವೈಸಿ, ಫೆ. 5ರಂದು ನಡೆಯುವ ಚುನಾವಣೆಯಲ್ಲಿ ‘ಗಾಳಿಪಟ’ ಗುರುತಿಗೆ ಮತ ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅಬಕಾರಿ ನೀತಿ ಹಗರಣದಲ್ಲಿ ಅರವಿಂದ ಕೇಜ್ರವಾಲ್ ಅವರಿಗೆ ಜಾಮೀನು ಸಿಕ್ಕಿದ್ದು ಹೇಗೆ? ಮುಸ್ತಫಾಬಾದ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ತಾಹಿರ್ ಹುಸೇನ್ ಮತ್ತು ಓಕ್ಲಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಶಿಫ-ಉರ್-ರೆಹಮಾನ್ಗೆ ಯಾಕೆ ಜಾಮೀನು ಸಿಕ್ಕಿಲ್ಲ? ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಸೇರಿ ಇವರ ನಾಯಕರಿಗೆಲ್ಲಾ ಜಾಮೀನು ಸಿಕ್ಕಿದೆ. ಆದರೆ ಇವರಿಬ್ಬರು ಇನ್ನೂ ಜೈಲಿನಲ್ಲೇ ಇದ್ದಾರೆ. ಇವರು ಮಾಡಿದ ತಪ್ಪಾದರೂ ಏನು? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
 
				 
         
         
         
															 
                     
                     
                     
                     
                    


































 
    
    
        