ಚಿಕ್ಕಬಳ್ಳಾಪುರ: ಗುತ್ತಿಗೆದಾರರೊಬ್ಬರಿಂದ ಬರೋಬ್ಬರಿ 2 ಲಕ್ಷ ರೂ. ಲಂಚದ ಹಣ ಸ್ವೀಕರಿಸುವ ವೇಳೆ ಜಿಲ್ಲಾ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಕೃಷಿ ಅಧಿಕಾರಿಯೊಬ್ಬರನ್ನು ಬಂಧಿಸುವ ಘಟನೆ ನಗರದ ಹೊರ ವಲಯದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಬಳಿ ಎ.5ರ ಶನಿವಾರ ಮಧ್ಯಾಹ್ನ ನಡೆದಿದೆ
ಲೋಕಾಯುಕ್ತರ ಕಾರ್ಯಾಚರಣೆ ವೇಳೆ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯನ್ನು ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಹಾಯಕ ಕೃಷಿ ಇಲಾಖೆ ಕಚೇರಿಯಲ್ಲಿ ಕೃಷಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಶಂಕರಯ್ಯ ಎಂದು ಗುರುತಿಸಲಾಗಿದೆ.
ಆಗಿದ್ದೇನು?
ಶಂಕರಯ್ಯ ಅವರು ಕೃಷಿ ಇಲಾಖೆಯಲ್ಲಿ ಕೆಲಸ ಮಾಡಿದ ಗುತ್ತಿಗೆದಾರರನಿಗೆ 11 ಲಕ್ಷ ರೂ. ಬಿಲ್ ಪಾವತಿಸಲು 3 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗುತ್ತಿಗೆದಾರರು 3 ಲಕ್ಷ ಕೊಡಲು ಸಾಧ್ಯವಾಗದೇ ಶನಿವಾರ ಮಧ್ಯಾಹ್ನ 2 ಲಕ್ಷ ರೂ. ಹಣವನ್ನು ಕೃಷಿ ಅಧಿಕಾರಿ ಶಂಕರಯ್ಯಗೆ ನೀಡುವಾಗ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಆ್ಯಂಟೋನಿ ಜಾನ್, ಡಿವೈಎಸ್‌ಪಿ ವಿರೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಸಿಬ್ಬಂದಿಯಾದ
ಗುರು, ಲಿಂಗರಾಜ್, ಸಂತೋಷ್, ನಾಗರಾಜ್, ರಮೇಶ್ ಮತ್ತಿತರ ದಾಳಿ ಮಿಂಚಿನ ಕಾರ್ಯಾಚರಣೆ ನಡೆಸಿ ಗುತ್ತಿಗೆದಾರನಿಂದ 2 ಲಕ್ಷ ರೂ. ಲಂಚದ ಹಣ ಸ್ವೀಕರಿಸುವ ವೇಳೆ ಶಂಕರಯ್ಯ ಲೋಕಾಯುಕ್ತರು ಬೀಸಿದ ಬೆಲೆಗೆ ಸಿಕ್ಕಿ ಬಿದ್ದಿದ್ದಾರೆ.
ಬ್ಯಾಗ್‌ನಲ್ಲಿ 13 ಲಕ್ಷ ಕಂತೆ ಕಂತೆ ನಗದು ಪತ್ತೆ!
ಇನ್ನೂ 2 ಲಕ್ಷ ರೂ. ಲಂಚದ ಹಣವನ್ನು ಗುತ್ತಿಗೆದಾರನಿಂದ ನೇರವಾಗಿ ಸ್ವೀಕರಿಸಿ ಲೋಕಾ ಬಲೆಗೆ ಬಿದ್ದಿರುವ ಕೃಷಿ ಅಧಿಕಾರಿ ಶಂಕರಯ್ಯ ಬಳಿ ಕಂತೆ ಕಂತೆ 13 ಲಕ್ಷ ರೂ. ನಗದು ಅವರ ಬ್ಯಾಗ್‌ನಲ್ಲಿ ಸಿಕ್ಕಿದೆ. ಈ ಹಣವನ್ನು ಕೂಡ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಕೃಷಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿರುವುದು ಈ ಪ್ರಕರಣದಿಂದ ಸಾಬೀತಾಗಿದೆ.