ಬೆಂಗಳೂರು : ರಾಜ್ಯದ ಸರ್ಕಾರಿ ನೌಕರರ ಜನವರಿ, ಫೆಬ್ರವರಿ ತಿಂಗಳ ಸಂಬಳ ಕಡಿತವಾಗಲಿದೆ ಎಂದು ತಿಳಿದು ಬಂದಿದೆ. ವೇತನ ಕಡಿತದ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಎಲ್ಲಾ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಮತ್ತು ಯೋಜನಾ ಶಾಖೆಗಳ ಅಧ್ಯಕ್ಷರುಗಳಿಗೆ ರಾಜ್ಯ ಸರ್ಕಾರ ಸುತ್ತೋಲೆಯ ಮೂಲಕ ಈ ವಿಷಯವನ್ನ ತಿಳಿಸಿದೆ.
ಎಷ್ಟು ಕಡಿತ:
ಸರ್ಕಾರಿ ನೌಕರರ ವೇತನದಲ್ಲಿ ಎಷ್ಟು ಕಡಿತವಾಗಲಿದೆ ಎಂದು ಸಹ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ವೇತನ ಕಡಿತದ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಎರಡನೇ ಭಾರಿ ಆಯ್ಕೆಯಾದ ಸಿ. ಎಸ್. ಷಡಾಕ್ಷರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2025ನೇ ಸಾಲಿನ ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಶುಲ್ಕ ಸಂಗ್ರಹಣೆಯ ಬಗ್ಗೆ ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.
ಆದೇಶದಲ್ಲಿ ಏನಿದೆ:
ಸರ್ಕಾರದ ಆದೇಶ ದಿನಾಂಕ 04-11-2019ರನ್ವಯ ಸಂಘದ ವಾರ್ಷಿಕ ಸದಸ್ಯತ್ವ ಶುಲ್ಕ ಸಂಗ್ರಹಣೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿರುತ್ತದೆ. ಅದರಂತೆ ತಮ್ಮ ಶಾಖಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಂದ ಸರ್ಕಾರಿ ನೌಕರರ ಸಂಘದ 2025ನೇ ಸಾಲಿನ ವಾರ್ಷಿಕ ಸದಸ್ಯತ್ವ ಶುಲ್ಕ ರೂ. 200 ಗಳನ್ನು 2025ನೇ ಜನವರಿ ಅಥವಾ ಫೆಬ್ರವರಿ ಮಾಹೆಯ ವೇತನದಲ್ಲಿ ಕಟಾವುಗೊಳಿಸಿ ಕೇಂದ್ರ ಸಂಘದ ಉಳಿತಾಯ ಜಮಾಗೊಳಿಸಲು ಕ್ರಮಕೈಗೊಳ್ಳುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸರ್ಕಾರಿ ನೌಕರರ ಬೇಡಿಕೆಗಳು:
ಜಿಲ್ಲಾ/ ತಾಲ್ಲೂಕು/ ಯೋಜನಾ ಶಾಖೆ ಕಾರ್ಯಕಾರಿ ಸಮಿತಿ ಸಭೆಯನ್ನು ದಿನಾಂಕ 15-01-2025ರೊಳಗೆ ಏರ್ಪಡಿಸಿ ಸದಸ್ಯತ್ವ ಸಂಗ್ರಹಣೆ ವಿಷಯವನ್ನು ಮಂಡಿಸಿ ಎಲ್ಲಾ ಪದಾಧಿಕಾರಿಗಳು/ ನಿರ್ದೇಶಕರು ಆಯಾ ಇಲಾಖಾ ನೌಕರರ ಸದಸ್ಯತ್ವ ಶುಲ್ಕವನ್ನು ವೇತನದಲ್ಲಿ ಕಟಾವುಗೊಳಿಸಲು ಕ್ರಮವಹಿಸುವುದು.
ತಮ್ಮ ಜಿಲ್ಲೆ/ ತಾಲ್ಲೂಕು ಶಾಖೆಯ ಲೆಟರ್‌ಹೆಡ್‌ನಲ್ಲಿ ಸುತ್ತೋಲೆಯೊಂದಿಗೆ ಲಗತ್ತಿಸಿರುವ ಕೇಂದ್ರ ಸಂಘದ ಬ್ಯಾಂಕ್ ಖಾತೆ ವಿವರದ ಮಾದರಿ ಪತ್ರ ಹಾಗೂ ಸರ್ಕಾರದ ಆದೇಶವನ್ನು ಖಜಾನಾಧಿಕಾರಿಗಳು ಹಾಗೂ ವೇತನ ಬಟವಾಡೆ ಅಧಿಕಾರಿಗಳಿಗೆ ನೀಡಿ, ಕೆ-2 ಮೂಲಕ ಸದಸ್ಯತ್ವ ಶುಲ್ಕವನ್ನು ಕಟಾಯಿಸಲು ಪತ್ರದ ಮೂಲಕ ಕೋರುವುದು.
2025ಕ್ಕೆ ಸರ್ಕಾರಿ ನೌಕರರ ನಿರೀಕ್ಷೆಗಳು:
ಜಿಲ್ಲಾ/ ತಾಲ್ಲೂಕು ಶಾಖೆ ಅಧ್ಯಕ್ಷರು ಖಜಾನಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಶೇ.100 ರಷ್ಟು ಸದಸ್ಯತ್ವ ಶುಲ್ಕ ಕಟಾವುಗೊಳಿಸುವ ಗುರಿ ಸಾಧಿಸುವುದು.
ಖಜಾನೆ-2 ಮತ್ತು ಹೆಚ್.ಆರ್.ಎಂ.ಎಸ್. ತಂತ್ರಾಂಶ ಅವಳಡಿಸದಿರುವ ಕೆಲವು ಇಲಾಖೆಗಳ ನೌಕರರ ವೇತನದಿಂದ ಕಟಾಯಿಸಲಾದ ಸದಸ್ಯತ್ವ ಶುಲ್ಕದ ಮೊತ್ತವನ್ನು ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಇವರಿಗೆ ಪಾವತಿಯಾಗುವಂತೆ ಚೆಕ್/ ಡಿಡಿ ಮೂಲಕ ನೀಡುವುದು.
ಚೆಕ್/ ಡಿಡಿ/ ನಗದು ರೂಪದಲ್ಲಿ ಸಂಗ್ರಹಿಸಲ್ಪಟ್ಟ ಸದಸ್ಯತ್ವ ಶುಲ್ಕವನ್ನು ವಿಳಂಬ ಮಾಡದೆ ಕೇಂದ್ರ ಸಂಘಕ್ಕೆ ಸಲ್ಲಿಸುವುದು. ಇವು ಸರ್ಕಾರಿ ನೌಕರರ ನಿರೀಕ್ಷೆಯಾಗಿದೆ.