ಅಮರಾವತಿ: GB (Guillain Barre) ಸಿಂಡ್ರೋಮ್ ಗೆ ನೆರೆಯ ಆಂಧ್ರ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದೆ.ಕಳೆದ 10 ದಿನಗಳಲ್ಲಿ ಆಂಧ್ರಪ್ರದೇಶದಲ್ಲಿ GB ಸಿಂಡ್ರೋಮ್ ಪೀಡಿತ 45 ವರ್ಷದ ಮಹಿಳೆ ಮತ್ತು ಅಪ್ರಾಪ್ತ ಬಾಲಕ ಸಾವನ್ನಪ್ಪಿದ್ದಾರೆ. GB ಸಿಂಡ್ರೋಮ್ ಎಂಬುದು ಆಟೋ ಇಮ್ಯೂನ್ ನರವೈಜ್ಞಾನಿಕ ಅಸ್ವಸ್ಥತೆಯಾಗಿದ್ದು, ಈ ಇಬ್ಬರ ಸಾವಿನೊಂದಿಗೆ ವ್ಯಾಪಕ ಅತಂಕ ಸೃಷ್ಟಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆಂಧ್ರ ಪ್ರದೇಶ ಆರೋಗ್ಯ ಸಚಿವ ಸತ್ಯ ಕುಮಾರ್ ಯಾದವ್ ಅವರು, ‘ಸೋಂಕು ಪೀಡಿತ 45 ವರ್ಷದ ಮಹಿಳೆ ಕಮಲಮ್ಮ ಭಾನುವಾರ ಗುಂಟೂರಿನ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ (GGH) ಮತ್ತು 10 ವರ್ಷದ ಬಾಲಕ 10 ದಿನಗಳ ಹಿಂದೆ ಶ್ರೀಕಾಕುಳಂನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಅಂತೆಯೇ ಆಂಧ್ರ ಪ್ರದೇಶದಲ್ಲಿ ಒಟ್ಟಾರೆ 17 GBS ಪ್ರಕರಣಗಳು ದಾಖಲಾಗಿವೆ. ಇದು ಸಾಂಕ್ರಾಮಿಕವಲ್ಲದ ಕಾಯಿಲೆಯಾಗಿದ್ದು, ಒಂದು ಲಕ್ಷದಲ್ಲಿ ಇಬ್ಬರಿಗೆ ಸೋಂಕು ತಗುಲುತ್ತದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಇದು ಹಠಾತ್ ಪ್ರಕರಣಗಳ ಏರಿಕೆಯಲ್ಲ, ಇದು ಸಾಮಾನ್ಯ” ಎಂದು ಯಾದವ್ ತಿಳಿಸಿದರು.
ಕಳೆದ ವರ್ಷ ಅಂದರೆ 2024ರಲ್ಲಿ ಇದೇ ಸೋಂಕಿನಿಂದಾಗಿ ಆಂಧ್ರ ಪ್ರದೇಶದಲ್ಲಿ ಒಟ್ಟು 267 ಪ್ರಕರಣಗಳು ವರದಿಯಾಗಿತ್ತು. ವರ್ಷದ ಮೊದಲಾರ್ಧದಲ್ಲಿ 141 ಪ್ರಕರಣಗಳು ಮತ್ತು ದ್ವಿತೀಯಾರ್ಧದಲ್ಲಿ 126 ಪ್ರಕರಣಗಳು ವರದಿಯಾಗಿವೆ ಎಂದು ಯಾದವ್ ಮಾಹಿತಿ ನೀಡಿದ್ದಾರೆ.