ಬೆಂಗಳೂರು: ಆಪರೇಷನ್ ಹಸ್ತದ ಬೆಳವಣಿಗೆಯ ನಡುವೆ ಮತ್ತೆ ಕಾಂಗ್ರೆಸ್ ನಲ್ಲಿ ಮತ್ತೆ ಬಣ ರಾಜಕೀಯದ ಸದ್ದು ಜೋರಾಗಿದೆಯೇ ಎಂಬ ಪ್ರಶ್ನೆ ಮತ್ತೆ ರಾಜಕೀಯ ವಲಯದಲ್ಲಿ ಕಾಡತೊಡಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ದಸರಾ ನೆಪದಲ್ಲಿ 20ಕ್ಕೂ ಹೆಚ್ಚು ಶಾಸಕರೊಂದಿಗೆ ಮೈಸೂರಿಗೆ ತೆರಳಲು ಸಿದ್ದತೆ ನಡೆಸಿದ್ದ ಸಚಿವ ಸತೀಶ್ ಜಾರಕಿಹೊಳಿ ನಡೆ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ತಮ್ಮ ಉಸ್ತುವಾರಿ ಜಿಲ್ಲಾ ಶಾಸಕರುಗಳನ್ನು ಒಗ್ಗೂಡಿಸಿಕೊಂಡು ಮೈಸೂರು ದಸರಾಗೆ ತೆರಳಲು ತಯಾರಿ ನಡೆಸಿದ್ದರು. ಇದಕ್ಕಾಗಿ ಬಸ್ ಕೂಡ ಸಿದ್ಧವಾಗಿ ನಿಂತಿತ್ತು. ಅಷ್ಟರಲ್ಲಿ ಈ ವಿಚಾರ ಹೈಕಮಾಂಡ್ ಗೆ ತಲುಪಿ ಮೈಸೂರು ದಸರಾ ಟ್ರಿಪ್ ಕ್ಯಾನ್ಸಲ್ ಮಾಡುವಂತೆ ಸತೀಶ್ ಜಾರಕಿಹೊಳಿ ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ.
ಆದರೆ ಈ ಕುರಿತು ಸತೀಶ್ ಜಾರಕಿಹೊಳಿ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ” ಸಮಾನ ಮನಸ್ಕರು ಜೊತೆ ಸೇರಿ ಟ್ರಿಪ್ ಹೋಗಬೇಕು ಎಂಬ ಆಸೆ ಇತ್ತು ಆದರೆ ಸದ್ಯ ಬೇಡ ಎಂದು ರದ್ದು ಮಾಡಿದ್ದೇವೆ. ಇಲ್ಲಿ ಯಾವುದೇ ಬಣ ಗಿಣ ಇಲ್ಲ. ಪಕ್ಷದೊಳಿಗಿನ ಸಮಾನ ಮನಸ್ಕರು ಯೋಜನೆ ಇದಾಗಿದ್ದು, ಮುಂದೆ ಹೋಗೋದಾದ್ರೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಹೋಗುತ್ತೇವೆ” ಎಂದು ಹೇಳಿದ್ದಾರೆ.