ಚಿತ್ರದುರ್ಗ: ದಾವಣಗೆರೆ -ಚಿತ್ರದುರ್ಗ- ತುಮಕೂರು ನೇರ ರೈಲ್ವೆ ಯೋಜನೆಯನ್ನು 2027ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ದಾವಣಗೆರೆ-ಚಿತ್ರದುರ್ಗ-ತುಮಕೂರು ನೂತನ ರೈಲ್ವೆ ಮಾರ್ಗದ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ 20 ರಿಂದ 30 ವರ್ಷಗಳವರೆಗೆ ದೇಶದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲ 7.25 ಲಕ್ಷ ಯೋಜನೆಗಳಿದ್ದವು, ಈ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುತ್ತಿದ್ದೇವೆ. 33 ಸಾವಿರ ಕೋಟಿ ರೂಪಾಯಿಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ದೇಶ ಅಭಿವೃದ್ಧಿಯಾಗಬೇಕಾದರೆ ದೇಶದ ಎಲ್ಲ ರಾಜ್ಯಗಳು ಅಭಿವೃದ್ಧಿಯಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದ್ದು, ಪ್ರತಿಷ್ಟಿತ ಯೋಜನೆಯಾದ ರಾಯದುರ್ಗ-ತುಮಕೂರು ಯೋಜನೆಯು ಕೂಡ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಟೆಂಡರ್ ಕರೆಯಲಾಗಿದ್ದು, ಇನ್ನೂ ಎರಡು ಕಡೆ ಶೀಘ್ರದಲ್ಲಿ ಕೆಲಸ ಪ್ರಾರಂಭವಾಗಲಿದೆ. ಅದೇ ರೀತಿ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಯೋಜನೆಯ ಸಮಸ್ಯೆಯನ್ನು ಬಗೆಹರಿಸಿ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಶೀಘ್ರವಾಗಿ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು. ದಾವಣಗೆರೆ -ಚಿತ್ರದುರ್ಗ- ತುಮಕೂರು ನೇರ ರೈಲ್ವೆ ಯೋಜನೆ ಹಾಗೂ ತುಮಕೂರು-ರಾಯದುರ್ಗ ರೈಲ್ವೆ ಮಾರ್ಗವನ್ನು 2027 ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಿ ಏಕಕಾಲಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದರು.