ನವದೆಹಲಿ :2031ರ ವೇಳೆಗೆ ಭಾರತ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು 2060ರ ವೇಳೆಗೆ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಮೈಕೆಲ್ ಡಿ ಪಾತ್ರಾ ಹೇಳಿದ್ದಾರೆ.
ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿ,
ಭಾರತವು ಕಾರ್ಮಿಕ ಉತ್ಪಾದಕತೆ, ಮೂಲಸೌಕರ್ಯ, ಜಿಡಿಪಿಯಲ್ಲಿ ಉತ್ಪಾದನಾ ವಲಯದ ಕೊಡುಗೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಆರ್ಥಿಕತೆಯ ಹಸಿರೀಕರಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳಲ್ಲಿ ಜಯವನ್ನು ಸಾಧಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
“ನಾನು ಹೇಳಿರುವ ಸಹಜ ವಿಷಯಗಳು ಮತ್ತು ಅದರ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವ ಸಂಕಲ್ಪವನ್ನು ಮಾಡಿದರೆ, ಭಾರತವು 2048ರ ವೇಳೆಗೆ ಅಲ್ಲ, 2031ರಲ್ಲೇ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು 2060ರ ವೇಳೆಗೆ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಬಹುದು ಎಂದು ಊಹಿಸಲು ಸಾಧ್ಯವಿದೆ. ಮುಂದಿನ ಹತ್ತು ವರ್ಷಗಳಲ್ಲಿ ಭಾರತವು ವಾರ್ಷಿಕ 9.6% ದರದಲ್ಲಿ ಬೆಳೆದರೆ, ಅದು ಕಡಿಮೆ-ಮಧ್ಯಮ ಆದಾಯದ ಸಂಕೋಲೆಗಳಿಂದ ಮುಕ್ತಿ ಹೊಂದಿ ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಲಿದೆ ಎಂದು ಅಂದಾಜಿಸಲಾಗಿದೆ” ಎಂದು ಹೇಳಿದ್ದಾರೆ.