ಕ್ಯಾಲಿಫೋರ್ನಿಯಾ : ಅಮೆರಿಕದ ಎಐ ಸೇವಾ ಸ್ಟಾರ್ಟ್‌ಅಪ್ ಮರ್ಕರ್ ಸಂಸ್ಥಾಪಕರಾದ ಮೂವರು ಯುವಕರು ಕೇವಲ 22ರ ಹರೆಯದಲ್ಲೇ ವಿಶ್ವದ ಅತ್ಯಂತ ಕಿರಿಯ ಸ್ವನಿರ್ಮಿತ ಶತಕೋಟ್ಯಾಧಿಪತಿಗಳು ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಶಾಲಾ ದಿನಗಳ ಗೆಳೆಯರಾದ ಆದರ್ಶ್ ಹಿರೇಮಠ್, ಸೂರ್ಯ ಮಿಧಾ ಮತ್ತು ಬ್ರೆಂಡನ್ ಫೂಡಿ ಈಗ ತಂತ್ರಜ್ಞಾನ ಜಗತ್ತಿನ ಗಮನ ಸೆಳೆದಿದ್ದಾರೆ. ಇವರಲ್ಲಿ ಆದರ್ಶ್ ಹಿರೇಮಠ್ ಕರ್ನಾಟಕ ಮೂಲದ ಕುಟುಂಬದವರು, ಸೂರ್ಯ ಮಿಧಾ ಭಾರತೀಯ ಮೂಲದವರು, ಫೂಡಿ ಮಾತ್ರ ಸ್ಥಳೀಯ ಅಮೆರಿಕನ್.
ಈ ಸಾಧನೆಯೊಂದಿಗೆ, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ 2008ರಲ್ಲಿ 23ರ ವಯಸ್ಸಿನಲ್ಲಿ ಬಿಲಿಯನೇರ್ ಆದ ದಾಖಲೆಯನ್ನು ಇವರು ಮುರಿದಿದ್ದಾರೆ. 23ರೊಳಗೆ ಈ ಮಟ್ಟ ತಲುಪಿದ ಪ್ರಥಮ ತ್ರಯಿಯಾಗಿ ಇವರ ಹೆಸರು ಜಾಗತಿಕ ದಾಖಲೆಗಳಿಗೆ ಸೇರಿದೆ. ಮರ್ಕರ್ ಸಂಸ್ಥಾಪಕರಾದ ಈ ಮೂವರು ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿ ಪರಿಸರದಲ್ಲಿರುವ ಬೇ ಏರಿಯಾದಲ್ಲಿ ಬೆಳೆದವರು. ಶಾಲೆಯಲ್ಲಿದ್ದಾಗ ನಡೆದ ವಾದವಿವಾದ (ಡಿಬೇಟ್) ಕಾರ್ಯಕ್ರಮದಲ್ಲಿ ಮೂವರಿಗೆ ಪರಿಚಯವಾಗಿತ್ತು. ನಂತರವೇ ಅವರ ಸ್ನೇಹ ಮತ್ತು ತಂತ್ರಜ್ಞಾನ ಆಸಕ್ತಿ ಒಂದಾಗಿ ಬೆಳವಣಿಗೆಯಾಯಿತು.
ಪ್ರತಿಭಾವಂತ ಯುವಕರಿಗೆ ನೀಡಲಾಗುವ ಥಿಯೆಲ್ ಫೆಲೋಶಿಪ್‌ಗೆ ಆಯ್ಕೆಗೊಂಡ ಬಳಿಕ, ಇವರ ವೃತ್ತಿ ದಾರಿ ಸಂಪೂರ್ಣ ಬದಲಾಗಿದೆ. ಫೆಲೋಶಿಪ್ ಮೂಲಕ ಲಭ್ಯವಾದ ಗ್ರ್ಯಾಂಟ್ ನೆರವಿನಿಂದ, ಮೂವರೂ ಕಾಲೇಜು ಶಿಕ್ಷಣವನ್ನು ತಾತ್ಕಾಲಿಕವಾಗಿ ತೊರೆಯಲು ನಿರ್ಧರಿಸಿ 2023ರಲ್ಲಿ ಮರ್ಕರ್ ಸ್ಟಾರ್ಟ್‌ಅಪ್ ಸ್ಥಾಪಿಸಿದರು. ಮೊದಲಿಗೆ ಅಮೆರಿಕನ್ ಕಂಪನಿಗಳಿಗೆ ಭಾರತದಿಂದ ಫ್ರೀಲ್ಯಾನ್ಸ್ ಕೋಡರ್‌ಗಳನ್ನು ಸಂಪರ್ಕಿಸುವ ಪ್ಲಾಟ್‌ಫಾರ್ಮ್ ನಿರ್ಮಿಸುವುದರ ಮೂಲಕ ಮರ್ಕರ್ ತನ್ನ ಕಾರ್ಯ ಆರಂಭಿಸಿತು. ಭಾರತದಲ್ಲಿರುವ ಡೆವಲಪರ್‌ಗಳು ಮತ್ತು ಅಮೆರಿಕದ ಟೆಕ್ ಸಂಸ್ಥೆಗಳ ನಡುವಣ ಕೊಂಡಿಯಾಗುವ, ಎಐ ಆಧಾರಿತ ಮ್ಯಾಚಿಂಗ್ ವ್ಯವಸ್ಥೆ ಇದಾಗಿತ್ತು. ಬಳಿಕ ಕಂಪನಿಯ ಚಟುವಟಿಕೆ ವಿಸ್ತರಿಸಿದ್ದು, ಡಾಟಾ ಲೇಬೆಲಿಂಗ್ ವ್ಯವಸ್ಥೆ, ಎಐ ಮಾದರಿಗಳನ್ನು ತರಬೇತಿ ಮಾಡಲು ಮಾನವ ಸಂಪನ್ಮೂಲ ಸೇವೆ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ವ್ಯಾಪಿಸಿತು. ದೊಡ್ಡ ಎಐ ಲ್ಯಾಬ್‌ಗಳಿಗೆ ಮೂಲಸೌಕರ್ಯ ಮತ್ತು ತರಬೇತಿ ನೆರವು ನೀಡುವ ಸಂಸ್ಥೆ ಎಂದು ಮರ್ಕರ್ ಪ್ರಸಿದ್ಧಿ ಗಳಿಸಿದೆ.
ಸಂಸ್ಥೆಯೊಳಗೆ ಆದರ್ಶ್ ಹಿರೇಮಠ್ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಆಗಿ, ಬ್ರೆಂಡನ್ ಫೂಡಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಮತ್ತು ಸೂರ್ಯ ಮಿಧಾ ಬೋರ್ಡ್ ಚೇರ್ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯುವಜನತೆ, ನವೀನ ಆಲೋಚನೆ ಮತ್ತು ಎಐ ಕ್ಷೇತ್ರದ ಅರಿವಿನ ಸಂಯೋಗದಿಂದ ಕೇವಲ ಎರಡು ವರ್ಷಗಳಲ್ಲಿ ಬಿಲಿಯನೇರ್ ಪಟ್ಟಕ್ಕೇರಿರುವ ಮರ್ಕರ್ ಸಂಸ್ಥಾಪಕರ ಸಾಧನೆ ಜಾಗತಿಕ ಟೆಕ್ ಉದ್ಯಮದಲ್ಲಿ ಹೊಸ ಚರಿತ್ರೆ ರಚಿಸಿದೆ. ವಿಶೇಷವಾಗಿ ಕರ್ನಾಟಕ ಮೂಲದ ಆದರ್ಶ್ ಹಿರೇಮಠ್‌ರ ಸಾಧನೆ ರಾಜ್ಯದ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ.

































