ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 23,000 ಕೋಟಿ ರೂಪಾಯಿಗಳ ಸಾಗರ ಯೋಜನೆಗಳಿಗೆ ಚಾಲನೆ ನೀಡಿದರು ಮತ್ತು ನೀಲಿ ಆರ್ಥಿಕತೆಯ ದೀರ್ಘಾವಧಿಯ ದೃಷ್ಟಿ ದಾಖಲೆಯನ್ನು ಅನಾವರಣಗೊಳಿಸಿದರು. ಬಂದರು ಅಭಿವೃದ್ಧಿ, ಸುಸ್ಥಿರ ಬಳಕೆಗೆ ಉತ್ತೇಜನ ಹಾಗೂ ಅಂತರರಾಷ್ಟ್ರೀಯ ಸಹಯೋಗವನ್ನು ಸುಗಮಗೊಳಿಸುವ ಕಾರ್ಯತಂತ್ರದ ಉಪಕ್ರಮಗಳಿಗೆ ಅನುಗುಣವಾಗಿ ಈ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಂಗಳವಾರದಿಂದ ಮೂರು ದಿನಗಳ ಕಾಲ ನಡೆಯುವ ಮೂರನೇ ಆವೃತ್ತಿಯ ಜಾಗತಿಕ ಕಡಲ ಭಾರತ ಶೃಂಗಸಭೆಗೆ ಮೋದಿ ಅವರು ವರ್ಚುವಲ್ ಆಗಿ ಚಾಲನೆ ನೀಡಿದರು. ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆಯ ಮೂರನೇ ಆವೃತ್ತಿಯ ಸಂದರ್ಭದಲ್ಲಿ ಅವರು ಭಾರತೀಯ ಕಡಲ ನೀಲಿ ಆರ್ಥಿಕತೆಗಾಗಿ ‘ಅಮೃತ್ ಕಾಲ್ ವಿಷನ್ 2047’ನೊಂದಿಗೆ ಜೋಡಿಸಲಾದ ರೂಪಾಯಿ 23,000 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಅಡಿಪಾಯ ಹಾಕಿದರು. ಸಮುದ್ರಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಂದರುಗಳ ಭವಿಷ್ಯ, ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ತಗ್ಗಿಸುವಿಕೆ, ಕರಾವಳಿ ಪ್ರದೇಶದಲ್ಲಿ ಹಡಗುಗಳ ರವಾನೆ, ಒಳನಾಡು ಜಲಸಾರಿಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಶೃಂಗಸಭೆಯಲ್ಲಿ ಚರ್ಚಿಸಲಾಗುತ್ತದೆ.