ಶ್ರೀನಗರ : ಭಾರತ 24 ಗಂಟೆಗಳ ಕಾಲ ಬಗ್ಲಿಹಾರ್ ಹಾಗೂ ಸಲಾಲ್ ಡ್ಯಾಂ ನೀರನ್ನು ತಡೆದು, ಒಂದೇ ಸಲಕ್ಕೆ 28,000 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಿದ್ದರಿಂದ ಪಾಕಿಸ್ತಾನದಲ್ಲಿ ಹಠಾತ್ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ.
ಸಿಯಾಲ್ ಕೋಟೆ ಸೇರಿದಂತೆ ಅನೇಕ ಭಾಗಗಳಲ್ಲಿ ಚೆನಾಬ್ ನದಿ ತುಂಬಿ ಹರಿಯುತ್ತಿದೆ. ಸುಮಾರು 24 ಗಂಟೆಗಳ ಕಾಲ ನೀರನ್ನು ತಡೆಹಿಡಿದು ಬಿಡುಗಡೆ ಮಾಡಿದ್ದರಿಂದ ನದಿಯ ಕೆಳಭಾಗದಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಇದರ ಬೆನ್ನಲ್ಲೇ ಪಾಕ್ ಸಿಯಾಲ್‌ಕೋಟ್, ಗುಜರಾತ್ ಮತ್ತು ಹೆಡ್ ಖಾದಿರಾಬಾದ್ ಪ್ರದೇಶಕ್ಕೆ ಪ್ರವಾಹ ಎಚ್ಚರಿಕೆ ನೀಡಿದೆ.
ಭಾರತ ನೀರನ್ನು ತಡೆದಿದ್ದರಿಂದ ಒಂದೇ ದಿನ ಚೆನಾಬ್ ನದಿಯ ನೀರಿನ ಮಟ್ಟ 31,900 ಕ್ಯುಸೆಕ್ ನಷ್ಟು ಇಳಿಕೆಯಾಗಿತ್ತು. ಚೆನಾಬ್ ನದಿಗೆ ಅಡ್ಡಲಾಗಿ ರಾಮಬನದಲ್ಲಿ ಬಾಗ್ಲಿಹಾರ್ ಮತ್ತು ರಿಯಾಸಿಯಲ್ಲಿ ಸಲಾಲ್ ಜಲವಿದ್ಯುತ್ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಸೋಮವಾರ ಈ ಎರಡು ಅಣೆಕಟ್ಟಿನಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ನೀರು ಹರಿಸುವುದನ್ನು ನಿಲ್ಲಿಸಿದ ಕಾರಣ ಪಾಕ್‌ನ ಮರಾಲಾ ಬಳಿ ಭಾನುವಾರ 35,000 ಕ್ಯುಸೆಕ್ ನಷ್ಟು ಹರಿಯುತ್ತಿದ್ದ ನೀರು, ಸೋಮವಾರ 3,100 ಕ್ಯುಸೆಕ್‌ಗೆ ಇಳಿಕೆಯಾಗಿದೆ ಎಂದು ವರದಿಯಾಗಿದೆ.