ಮುಂಬೈ : ಐಪಿಎಲ್ ಹಣಾಹಣಿಯ ಕ್ರೇಜ್ ಜೋರಾಗಿರುವಾಗಲೇ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಸಹೋದರನ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.
4 ಕೋಟಿ 30 ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪದಲ್ಲಿ ಹಾರ್ದಿಕ್ ಪಾಂಡ್ಯ ಸಹೋದರ ವೈಭವ್ ಪಾಂಡ್ಯ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ವೈಭವ್ ಪಾಂಡ್ಯ, ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಮೂವರು ಸೇರಿ ಒಂದು ಪಾಲುದಾರಿಕೆ ಸಂಸ್ಥೆಯೊಂದನ್ನ ನಡೆಸುತ್ತಿದ್ದರು. ಈ ಸಂಸ್ಥೆ ಆರ್ಥಿಕ ನಷ್ಟದಲ್ಲಿ ಸಿಲುಕಿದ್ದು ವೈಭವ್ ಅವರ ಮೇಲೆ 4.3 ಕೋಟಿ ರೂಪಾಯಿ ದುರುಪಯೋಗ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಹಾರ್ದಿಕ್ ಪಾಂಡ್ಯ ಮತ್ತವರ ಸಹೋದರ ಕೃನಾಲ್ ಅವರಿಗೆ ವ್ಯವಹಾರದಲ್ಲಿ ಮೋಸ ಮಾಡಿದ್ದಾರೆ. ವೈಭವ್ ಪಾಂಡ್ಯ ವಿರುದ್ಧ ಮೋಸ ಮತ್ತು ಪೋರ್ಜರಿ ಮಾಡಿದ ಆರೋಪ ಕೇಳಿ ಬಂದಿದೆ.
ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 2021ರಲ್ಲಿ ವೈಭವ್ ಪಾಂಡ್ಯ, ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಮೂವರು ಸೇರಿ ಪಾಲುದಾರಿಕೆ ಸಂಸ್ಥೆಯನ್ನ ಆರಂಭಿಸಿದ್ದರು. ಈ ಕಂಪನಿಗೆ ಹಾರ್ದಿಕ್ ಪಾಂಡ್ಯ, ಕೃನಾಲ್ ಇಬ್ಬರೂ ತಲಾ ಶೇ. 40ರಷ್ಟು ಬಂಡವಾಳ ಹೂಡಿಕೆ ಮಾಡಿದ್ದರು. ಉಳಿದ ಶೇಕಡಾ 20ರಷ್ಟು ಹಣವನ್ನು ವೈಭವ್ ಹೂಡಿಕೆ ಮಾಡಿದ್ದರು. ಇದಾದ ಮೇಲೆ ಮೂವರ ಮಧ್ಯೆ ವ್ಯಾಪಾರ ಸಂಬಂಧ ಒಪ್ಪಂದ ಆಗಿತ್ತು. ಆದರೆ ಒಪ್ಪಂದವನ್ನು ಉಲ್ಲಂಘಿಸಿದ್ದ ವೈಭವ್ ಮತ್ತೊಂದು ಸಂಸ್ಥೆಯ ಡೀಲಿಂಗ್ ಮಾಡಿದ್ದರು. ಇದರಲ್ಲಿ ಪಾಂಡ್ಯ ಬ್ರದರ್ಸ್ ಒಪ್ಪಂದ ಮಾಡಿ 4.3 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.