ನವದೆಹಲಿ : 4 ವರ್ಷದ ಬಾಲಕಿಯನ್ನು ಚಿರತೆ ಎತ್ತಿಕೊಂಡು ಹೋಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ ನಡೆದಿದೆ.
ಶನಿವಾರ ಸಂಜೆ 7 ಗಂಟೆ ಹೊತ್ತಿಗೆ ಚಿರತೆ ಬಾಲಕಿಯನ್ನು ಎಳೆದುಕೊಂಡು ಹೋಗಿದೆ. ಈ ಅವಘಡದ ಬಗ್ಗೆ ಮಾಹಿತಿ ಪಡೆದ ತಕ್ಷಣ ಆ ಪ್ರದೇಶದ ರೇಂಜ್ ಆಫೀಸರ್ ಉಧಮ್‌ಪುರ ಕಂಟ್ರೋಲ್ ರೂಮ್‌ನಿಂದ ಶೋಧ ತಂಡಗಳನ್ನು ಕಳುಹಿಸಿದ್ದಾರೆ. ಆದರೆ ಇನ್ನೂ ಆ ಬಾಲಕಿಯ ಪತ್ತೆಯಾಗಿಲ್ಲ.
ಈ ಹಿಂದೆ ಇದೇ ಪ್ರದೇಶದಲ್ಲಿ 4 ವರ್ಷದ ಬಾಲಕಿ ಚಿರತೆಗೆ ಬಲಿಯಾದ ಅಹಿತಕರ ಘಟನೆ ನಡೆದಿತ್ತು.ಈ ಕುರಿತು ಉಧಮ್ಪುರದ ವನ್ಯಜೀವಿ ಇಲಾಖೆಯ ರೇಂಜ್ ಆಫೀಸರ್ ರಾಕೇಶ್ ಶರ್ಮಾ ಮಾಹಿತಿ ನೀಡಿದ್ದು, ನಮಗೆ ಮಾಹಿತಿ ದೊರೆಯುತ್ತಿದ್ದಂತೆ, ನಾವು ಉಧಮ್‌ಪುರ ನಿಯಂತ್ರಣ ಕೊಠಡಿಯಿಂದ ಶೋಧ ತಂಡಗಳನ್ನು ಕಳುಹಿಸಿದ್ದೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ. ಇದೊಂದು ಅತ್ಯಂತ ದುರದೃಷ್ಟಕರ ಘಟನೆಯಾಗಿದ್ದು, ಸಂತ್ರಸ್ತೆಯ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನಾವು ಮಾಡುತ್ತೇವೆ ಎಂದಿದ್ದಾರೆ.
ಈ ಬಗ್ಗೆ ವಿವಿಧ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಜಾಗೃತಿ ಅಭಿಯಾನದ ಮೂಲಕ ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಒಬ್ಬಂಟಿಯಾಗಿ ಹೋಗಲು ಬಿಡಬೇಡಿ ಎಂದು ನಾವು ಜನರಿಗೆ ವಿನಂತಿಸುತ್ತಿದ್ದೇವೆ ಎಂದಿದ್ದಾರೆ.