ಚಿತ್ರದುರ್ಗ: 40 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಯಾವುದೇ ವಿವೇಚನೆ, ಲೆಕ್ಕಾಚಾರ ಇಲ್ಲದೇ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ನಂತರ ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಕೊರತೆಯುಂಟಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗದ ಹಿನ್ನೆಲೆಯಲ್ಲಿ ಬೇಸತ್ತಿರುವ ಕಾಂಗ್ರೆಸ್ನ 40 ಜನ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದಕ್ಕೆ ಪೂರಕ ಎಂಬಂತೆ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅವರು ಈಚೆಗೆ ತಮ್ಮ ಸರ್ಕಾರದ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ದಿವಾಳಿಯ ಅಂಚಿಗೆ ತಲುಪಿದೆ. ಇದರ ವಿರುದ್ಧ ಒಬ್ಬೊಬ್ಬರೇ ಶಾಸಕರು ಬಂಡೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಿಕೊಳ್ಳಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.