ನವದೆಹಲಿ : ಸೌದಿ ಅರೇಬಿಯಾದಲ್ಲಿ ಮಕ್ಕಾ ಸಮೀಪ ಸೋಮವಾರ ಮುಂಜಾನೆ ಬಸ್ ಮತ್ತು ಡೀಸೆಲ್ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 42 ಭಾರತೀಯ ಮಕ್ಕಾ ಯಾತ್ರಿಕರು ಮೃತಪಟ್ಟಿದ್ದಾರೆಂದು ವರದಿಯಾಗಿದೆ.
ಮಕ್ಕಾದಿಂದ ಮದೀನಾಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಸೋಮವಾರ ಮುಂಜಾನೆ 1.30ರ ವೇಳೆಗೆ ಮುಫ್ರಿಹತ್ ಎಂಬ ಸ್ಥಳದಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದಿಂದ ತೀವ್ರತೆಯಿಂದಾಗಿ ಬಸ್ಗೆ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಬಸ್ನಲ್ಲಿದ್ದವರೆಲ್ಲ ಹೈದರಾಬಾದ್ನ ಉಮ್ರಾ ಯಾತ್ರಿಕರು. ಮಕ್ಕಾದ ಧಾರ್ಮಿಕ ವಿಧಿಗಳನ್ನು ಪೂರೈಸಿದ ಬಳಿಕ ಅವರು ಖಾಸಗಿ ಬಸ್ನಲ್ಲಿ ಮದೀನಾಕ್ಕೆ ಹೊರಟಿದ್ದರು. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಅಪಘಾತಕ್ಕೀಡಾದ ಬಸ್ನಲ್ಲಿ 20 ಮಹಿಳೆಯರು ಮತ್ತು 11 ಮಕ್ಕಳಿದ್ದರು. ಅಪಘಾತದ ವೇಳೆ ಎಲ್ಲರೂ ಗಾಢ ನಿದ್ದೆಯಲ್ಲಿದ್ದರು ಎಂದು ವರದಿಗಳು ತಿಳಿಸಿವೆ.
ಪ್ರಾಥಮಿಕ ವರದಿಗಳು ಕನಿಷ್ಠ 42 ಮಂದಿ ಸಾವಿಗೀಡಾಗಿದ್ದಾರೆ ಮತ್ತು ಎಲ್ಲರೂ ಭಾರತೀಯರು ಎಂದು ಹೇಳಿವೆ. ಅಧಿಅಕರಿಗಳು ಮೃತರ ಗುರುತು ಪತ್ತೆಹಚ್ಚುವ ಪ್ರಕ್ರಿಯಲ್ಲಿ ತೊಡಗಿದ್ದಾರೆ. ಪರಿಹಾರ ಕಾರ್ಯ ನಡೆಯುತ್ತಿದ್ದು, ಖಚಿತ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

































