ಲಕ್ನೋ : ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಒಂದು ಭವ್ಯವಾದ ಬಂಗಲೆಯಲ್ಲಿ ಪಶ್ಚಿಮ ಆರ್ಕ್ಟಿಕಾ, ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ರಾಷ್ಟ್ರಗಳ ರಾಯಭಾರಿ ಕಚೇರಿ ಎಂದು ವಂಷಿಸುತ್ತಿದ್ದ ಶಂಕಿತ ಹರ್ಷವರ್ಧನ್ ಜೈನ್‌ನನ್ನು ಯುಪಿ ಎಸ್‌ಟಿಎಫ್ ಬಂಧಿಸಿದೆ.
ದಾಳಿ ವೇಳೆ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ನಾಲ್ಕು ಕಾರು, 12 ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳು, ವಿದೇಶಾಂಗ ಸಚಿವಾಲಯದ ಮುದ್ರೆಯೊಂದಿಗೆ ನಕಲಿ ದಾಖಲೆಗಳು, ಎರಡು ನಕಲಿ ಪ್ಯಾನ್ ಕಾರ್ಡ್‌ಗಳು, ವಿವಿಧ ದೇಶಗಳು ಮತ್ತು ಕಂಪನಿಗಳ ಮೂವತ್ನಾಲ್ಕು ಸೀಲುಗಳು, ಎರಡು ನಕಲಿ ಪ್ರೆಸ್ ಕಾರ್ಡ್‌ಗಳು, 44.7 ಲಕ್ಷ ರೂ. ನಗದು, ವಿವಿಧ ದೇಶಗಳಿಂದ ಬಂದ ವಿದೇಶಿ ಕರೆನ್ಸಿ, ವಿವಿಧ ಕಂಪನಿಗಳ ದಾಖಲೆಗಳು. ಹೆಚ್ಚುವರಿ ಹದಿನೆಂಟು ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ಹಲವಾರು ಕಾರುಗಳನ್ನು ಹೊಂದಿದ್ದ. ಜೊತೆಗೆ ಪ್ರಧಾನಿ, ರಾಷ್ಟ್ರಪತಿ ಮತ್ತು ಇತರ ಗಣ್ಯರೊಂದಿಗೆ ತಮ್ಮ ಮಾರ್ಫ್ ಮಾಡಿದ ಛಾಯಾಚಿತ್ರಗಳನ್ನು ಬಳಸಿಕೊಂಡು ಜನರ ಗಮನ ಸೆಳೆಯಲು ಯತ್ನಿಸುತ್ತಿದ್ದ. ದೇಶದಲ್ಲಿ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ದಲ್ಲಾಳಿ ಮಾಡುವುದು ಮತ್ತು ಶೆಲ್ ಕಂಪನಿಗಳ ಮೂಲಕ ಹವಾಲಾ ದಂಧೆಯನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಹರ್ಷವರ್ಧನ್ ಚಂದ್ರಸ್ವಾಮಿ ಮತ್ತು ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಅವರೊಂದಿಗೆ ಈ ಹಿಂದೆ ಸಂಪರ್ಕ ಹೊಂದಿದ್ದ ಎಂದು ತನಿಖೆ ಮೂಲಕ ತಿಳಿದುಬಂದಿದೆ. 2011 ರಲ್ಲಿ, ಆತನ ಬಳಿ ಅಕ್ರಮ ಸ್ಯಾಟಲೈಟ್ ಫೋನ್ ಕೂಡ ಪತ್ತೆಯಾಗಿತ್ತು, ಇದಕ್ಕಾಗಿ ಕವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಈ ಬಗ್ಗೆ ತನಿಖೆ ಮುಂದುವರೆದಿದೆ.