ನವದೆಹಲಿ: 5 ವರ್ಷದ ಬಾಲಕನನ್ನು ವೃದ್ಧನೊಬ್ಬ ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಕ್ತಿ ಪದೇ ಪದೇ ಮಗುವನ್ನು ನೆಲಕ್ಕೆ ಎಸೆಯುತ್ತಿರುವುದನ್ನು ತೋರಿಸುತ್ತದೆ. ದಾರ್ಶನಿಕರ ವೇಷ ಧರಿಸಿದ್ದ ದಾಳಿಕೋರನನ್ನು 52 ವರ್ಷದ ಓಂಪ್ರಕಾಶ್ ಎಂದು ಪೊಲೀಸರು ಗುರುತಿಸಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.
ಸ್ಥಳೀಯರ ಪ್ರಕಾರ ಆರೋಪಿ ಸಪ್ತಕೋಸಿ ಯಾತ್ರೆ ನಡೆಸುತ್ತಿದ್ದ. ಬಾಲಕನ ತಂದೆ ಯಾತ್ರೆಯ ಮಾರ್ಗದಲ್ಲಿ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದಾರೆ. ಅಜ್ಞಾತ ಕಾರಣಕ್ಕಾಗಿ ಓಂಪ್ರಕಾಶ್ ಅಪ್ರಾಪ್ತನನ್ನು ಎತ್ತಿಕೊಂಡು ಹಲವಾರು ಬಾರಿ ನೆಲದ ಮೇಲೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಆರೋಪಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಬಳಿಕ ಘಟನೆಯ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದೆ. ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಲ್ಲದೇ ಸಿಸಿ ಕ್ಯಾಮೆರಾಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.