ಸಾರ್ವಜನಿಕ ವಲಯದ ಬ್ಯಾಂಕುಗಳು ಹೆಚ್ಚುತ್ತಿರುವ ವ್ಯವಹಾರದ ಅಗತ್ಯತೆ ಹಾಗು ವಿಸ್ತರಣೆಯನ್ನು ಪೂರೈಸಲು ಇದೇ ಹಣಕಾಸು ವರ್ಷದಲ್ಲಿ ಸುಮಾರು 50,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿವೆ.
ಒಟ್ಟು ನೇಮಕಾತಿಯಲ್ಲಿ ಸುಮಾರು 21,000 ಅಧಿಕಾರಿ ದರ್ಜೆ ಇನ್ನುಳಿದಂತೆ ಗುಮಾಸ್ತರು ಹಾಗು ಇತರೆ ಸಿಬ್ಬಂದಿಯ ನೇಮಕಾತಿ ನಡೆಯಲಿದೆ ಎಂದು ವಿವಿಧ ಬ್ಯಾಂಕುಗಳಿಂದ ಸಂಗ್ರಹಿಸಲಾದ ದತ್ತಾಂಶ ಹೇಳುತ್ತಿದೆ.
ದೇಶದ 12 ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ, ಅತಿದೊಡ್ಡದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಈ ಹಣಕಾಸು ವರ್ಷದಲ್ಲಿ ವಿಶೇಷ ಅಧಿಕಾರಿಗಳೂ ಸೇರಿದಂತೆ ಸುಮಾರು 20,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಈ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೂಲಕ ದೇಶಾದ್ಯಂತ ಇರುವ ತನ್ನ ಶಾಖೆಗಳಲ್ಲಿ ಗ್ರಾಹಕರ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ಈಗಾಗಲೇ 505 ಪ್ರೊಬೇಷನರಿ ಅಧಿಕಾರಿಗಳು (ಪಿಒ) ಮತ್ತು 13,455 ಜೂನಿಯರ್ ಅಸೋಸಿಯೇಟ್ಗಳನ್ನು ನೇಮಿಸಿಕೊಂಡಿದೆ. 13,455 ಜೂನಿಯರ್ ಅಸೋಸಿಯೇಟ್ಗಳ ನೇಮಕಾತಿ ಪ್ರಕ್ರಿಯೆ 35 ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವ ಗುರಿ ಹೊಂದಿದೆ.
ಮಾರ್ಚ್ 2025ರ ವೇಳೆಗೆ ಎಸ್ ಬಿಐನಲ್ಲಿದ್ದ ಒಟ್ಟು ಸಿಬ್ಬಂದಿಯ ಸಂಖ್ಯೆ 2,36,226. ಇದರಲ್ಲಿ ಕಳೆದ ಆರ್ಥಿಕ ವರ್ಷಾಂತ್ಯದಲ್ಲಿ 1,15,066 ಮಂದಿ ಅಧಿಕಾರಿಗಳಿದ್ದರು. ಎಸ್ ಬಿಐ 2024-25ರಲ್ಲಿ ಪ್ರತಿ ಪೂರ್ಣಾವಧಿ ಉದ್ಯೋಗಿಗೆ ಸರಾಸರಿ 40,440.59 ನೇಮಕಾತಿ ವೆಚ್ಚ ಮಾಡುತ್ತಿದೆ. ಪ್ರತಿ ವರ್ಷ ಶೇ 2ಕ್ಕಿಂತ ಕಡಿಮೆ ಉದ್ಯೋಗ ಕಡಿತದ ಸ್ಥಿರ ದಾಖಲೆಯನ್ನೂ ಬ್ಯಾಂಕ್ ಹೊಂದಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.
ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಪ್ರಸ್ತುತ ಹಣಕಾಸು ವರ್ಷದಲ್ಲಿ ತನ್ನ ಸಿಬ್ಬಂದಿ ಸಂಖ್ಯೆಯನ್ನು 5,500ಕ್ಕಿಂತ ಹೆಚ್ಚಿಸಲು ತೀರ್ಮಾನಿಸಿದೆ. ಮಾರ್ಚ್ 2025ರ ವೇಳೆಗೆ, ಬ್ಯಾಂಕ್ ನಲ್ಲಿದ್ದ ಒಟ್ಟು ಸಿಬ್ಬಂದಿ ಸಂಖ್ಯೆ 1,02,746.
ಸರ್ಕಾರಿ ಸ್ವಾಮ್ಯದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಈ ವರ್ಷದಲ್ಲಿ ಸುಮಾರು 4,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯೋಜನೆ ರೂಪಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕ್ ಗಳು ತಮ್ಮ ಅಂಗಸಂಸ್ಥೆಗಳಲ್ಲಿನ ಹೂಡಿಕೆಯಿಂದ ಹಣ ಗಳಿಸುವ ಬಗ್ಗೆ ವಿಶೇಷವಾಗಿ ಗಮನಹರಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ಸೂಚಿಸಿದೆ. ಬ್ಯಾಂಕ್ ಗಳು ತಮ್ಮ ಕಾರ್ಯಾಚರಣೆಯನ್ನು ಮತ್ತಷ್ಟು ಹೆಚ್ಚಿಸಿದ ನಂತರ ಅವುಗಳನ್ನು ಷೇರುಪೇಟೆಗಳಲ್ಲಿ ಪಟ್ಟಿ ಮಾಡುವ ಮೂಲಕ ಉತ್ತಮ ಲಾಭ ಪಡೆಯಲು ಸಾಧ್ಯವಾಗುತ್ತದೆ.
ಮೂಲಗಳ ಪ್ರಕಾರ, ಮಧ್ಯಮ ಹಂತದಿಂದ ದೀರ್ಘಾವಧಿಯಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಷೇರು ಮಾರಾಟಕ್ಕಾಗಿ ಸುಮಾರು 15 ಅಂಗಸಂಸ್ಥೆಗಳು ಅಥವಾ ಪಿಎಸ್ಬಿಗಳ ಜಂಟಿ ಉದ್ಯಮಗಳು ಎದುರು ನೋಡುತ್ತಿವೆ. ಇನ್ನು, ಹಣಗಳಿಕೆಗೆ ಪೂರ್ವಭಾವಿಯಾಗಿ ಬ್ಯಾಂಕುಗಳು ತಮ್ಮ ಆಡಳಿತ, ವೃತ್ತಿಪರ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಧಾರಿಸುವತ್ತ ಗಮನ ಹರಿಸುತ್ತಿವೆ.