ವಾಷಿಂಗ್ಟನ್: ಜಾಗತಿಕ ಆರ್ಥಿಕತೆಗಳ ಮೇಲೆ ಪರಿಣಾಮ ಬೀರುವ ಮಹತ್ವದ ಬೆಳವಣಿಗೆಯಲ್ಲಿ ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂನಂತಹ ಇಂಧನ ಉತ್ಪನ್ನಗಳನ್ನು ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ 500% ಸುಂಕ ವಿಧಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರವಾಗಿ ಪರಿಗಣಿಸಿದ್ದಾರೆ.
ಒಂದು ವೇಳೆ ಇದನ್ನು ಜಾರಿಗೊಳಿಸಿದರೆ, ಭಾರತ ಮತ್ತು ಚೀನಾದಂತಹ ಪ್ರಮುಖ ಆಮದುದಾರರನ್ನು ನೇರವಾಗಿ ಟಾರ್ಗೆಟ್ ಮಾಡಿದಂತಾಗುತ್ತದೆ. ರಷ್ಯಾದ ಇಂಧನ ಆದಾಯವನ್ನು ಕುಂಠಿತಗೊಳಿಸುವುದು ಮತ್ತು ಉಕ್ರೇನ್‌ನಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಒತ್ತಡ ಹೇರುವ ಉದ್ದೇಶ ಇದಾಗಿದೆ.
ಸೆನೆಟರ್ ಲಿಂಡ್ಸೆ ಗ್ರಹಾಂ ಅವರಂತಹ ಪ್ರಭಾವಿ ವ್ಯಕ್ತಿಗಳು ಈ ಪ್ರಸ್ತಾಪವನ್ನು ಬೆಂಬಲಿಸಿದ್ದಾರೆ. ‘ನೀವು ರಷ್ಯಾದಿಂದ ಇಂಧನವನ್ನು ಖರೀದಿಸುತ್ತಿದ್ದರೆ ಮತ್ತು ಉಕ್ರೇನ್‌ಗೆ ಸಹಾಯ ಮಾಡದಿದ್ದರೆ, ಅಮೆರಿಕದಲ್ಲಿರುವ ನಿಮ್ಮ ಸರಕುಗಳಿಗೆ 500% ಸುಂಕ ವಿಧಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದರು.
ಒಂದು ವೇಳೆ ಈ ನಿರ್ಣಯ ಅಂಗೀಕಾರವಾದರೆ, ಜಾಗತಿಕ ನಿರ್ಬಂಧಗಳ ಸಮಯದಲ್ಲಿ ರಷ್ಯಾದ ತೈಲ ಮತ್ತು ಅನಿಲದ ಆಮದನ್ನು ಹೆಚ್ಚಿಸಿರುವ ಭಾರತ ಮತ್ತು ಚೀನಾದಂತಹ ದೇಶಗಳು, ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುವ ತಮ್ಮ ಉತ್ಪನ್ನಗಳ ಮೇಲೆ 500% ವರೆಗಿನ ಅಭೂತಪೂರ್ವ ಸುಂಕವನ್ನು ಎದುರಿಸಬೇಕಾಗುತ್ತದೆ. ಈ ಕ್ರಮವು ವ್ಯಾಪಾರ ಸಂಬಂಧಗಳಲ್ಲಿ, ವಿಶೇಷವಾಗಿ ಪ್ರಮುಖ ಕಾರ್ಯತಂತ್ರದ ಪಾಲುದಾರ ಭಾರತದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.