ಲಕ್ನೋ : ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ಆರು ಭಕ್ತರು ಮೃತಪಟ್ಟ ಘಟನೆ ಮಿರ್ಜಾಪುರದ ಚುನಾರ್ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ 9:30 ರ ಸುಮಾರಿಗೆ ಸಂಭವಿಸಿದೆ.
ಪ್ಲಾಟ್ಫಾರ್ಮ್ ಸಂಖ್ಯೆ 3 ರಲ್ಲಿ ಬೆಳಗ್ಗೆ 9:30 ರ ಸುಮಾರಿಗೆ ವೇಗವಾಗಿ ಬಂದ ಕಲ್ಕಾ ಮೇಲ್ ಎಕ್ಸ್ಪ್ರೆಸ್ ರೈಲು 7-8 ಯಾತ್ರಿಕರಿಗೆ ಡಿಕ್ಕಿ ಹೊಡೆದಿದೆ. ಈ ಪೈಕಿ 6 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿಖರವಾಗಿ ಸಾವನ್ನಪ್ಪಿದವರ ಸಂಖ್ಯೆಯನ್ನು ರೈಲ್ವೆ ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.
ಚೋಪನ್ನಿಂದ ಬಂದ ಪ್ಯಾಸೆಂಜರ್ ರೈಲಿನ ಮೂಲಕ ಭಕ್ತರು ಆಗಮಿಸಿದ್ದರು. ರೈಲು ಪ್ಲಾಟ್ಫಾರ್ಮ್ ಸಂಖ್ಯೆ 4 ರಲ್ಲಿ ನಿಂತಿತ್ತು. ಅವರು ಪ್ಲಾಟ್ಫಾರ್ಮ್ ಸಂಖ್ಯೆ 3 ಅನ್ನು ತಲುಪಲು ಹಳಿಗಳನ್ನು ದಾಟಲು ಮುಂದಾಗಿದ್ದರು. ಚುನಾರ್ನಲ್ಲಿ ನಿಗದಿತ ನಿಲುಗಡೆ ಇಲ್ಲದೆ ವೇಗವಾಗಿ ಬಂದ ಕಲ್ಕಾ ಎಕ್ಸ್ಪ್ರೆಸ್ ಯಾತ್ರಿಕರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಲವರ ದೇಹಗಳು ಛಿದ್ರಗೊಂಡಿವೆ ಎಂದು ತಿಳಿದುಬಂದಿದೆ.
ಭಕ್ತರು ಕಾರ್ತಿಕ ಪೂರ್ಣಿಮೆ ಪವಿತ್ರ ಸ್ನಾನ ಮತ್ತು ಆಚರಣೆಗಳಿಗಾಗಿ ವಾರಣಾಸಿಗೆ ತೆರಳುತ್ತಿದ್ದರು. ಘಟನಾ ಸ್ಥಳದಲ್ಲಿ ರೈಲ್ವೆ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ಪರಿಶೀಲನೆ ನಡೆಸಿದರು. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಸಿಎಂ ಸೂಚಿಸಿದ್ದಾರೆ
ಘಟನೆಯ ಬಗ್ಗೆ ಮಾಹಿತಿ ಪಡೆದ ಸಿಎಂ ಯೋಗಿ ಆದಿತ್ಯನಾಥ್, ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಬೇಕು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಸಂತ್ರಸ್ತರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

































