ವಾಷಿಂಗ್ಟನ್ : 2022 ರಲ್ಲಿ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಸುಮಾರು 44 ಬಿಲಿಯನ್ ಅಮೆರಿಕನ್ ಡಾಲರ್ ಹಣ ತೆತ್ತು ಟ್ವಿಟ್ಟರ್ ಸಂಸ್ಥೆ ಖರೀದಿಸಿದ್ದರು. ಬಳಿಕ ಅದರ ಹೆಸರನ್ನು ಎಕ್ಸ್ ಎಂದು ಮರು ನಾಮಕರಣ ಮಾಡುವ ಜೊತೆಯಲ್ಲೇ ಬರೋಬ್ಬರಿ 6 ಸಾವಿರ ನೌಕರರನ್ನು ಎಲಾನ್ ಮಸ್ಕ್ ಮನೆಗೆ ಕಳಿಸಿದ್ದರು. ಸಂಸ್ಥೆಯ ಒಟ್ಟು ಉದ್ಯೋಗಿಗಳ ಪೈಕಿ ಶೇ. 80 ರಷ್ಟು ಮಂದಿಯನ್ನು ಎಲಾನ್ ಮಸ್ಕ್ ಕಳೆದ 2 ವರ್ಷಗಳಲ್ಲಿ ಕೆಲಸದಿಂದ ಕಿತ್ತು ಹಾಕಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ! ಸುದ್ದಿ ಸಂಸ್ಥೆಯ ವರದಿ ಪ್ರಕಾರ ಎಕ್ಸ್ನ ಸುಮಾರು ಅರ್ಧದಷ್ಟು ನೌಕರರನ್ನು ಎಲಾನ್ ಮಸ್ಕ್ ಕಂಪನಿ ಖರೀದಿಸಿದ ಕೆಲವೇ ತಿಂಗಳಲ್ಲೇ ಗೇಟ್ ಪಾಸ್ ಕೊಟ್ಟಿದ್ದರು.
ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕುವ ಮುನ್ನ ಅವರ ಜೊತೆ ಮಾತನಾಡಲು ತಮ್ಮ ಸಹೋದರರಾದ ಜೇಮ್ಸ್ ಮಸ್ಕ್ ಹಾಗೂ ಸ್ಟೀವ್ ಡೇವಿಸ್ ಅವರನ್ನು ಎಲಾನ್ ಮಸ್ಕ್ ಕಳಿಸಿದ್ದರಂತೆ. ಉದ್ಯೋಗಿಗಳಿಗೆ ಕೇಳಿದ್ದು ಒಂದೇ ಪ್ರಶ್ನೆ! ಕೆಲಸದಿಂದ ಕಿತ್ತು ಹಾಕುವ ಉದ್ದೇಶದಿಂದಲೇ ಎಲಾನ್ ಮಸ್ಕ್ ಅವರ ಸಹೋದರರು ಉದ್ಯೋಗಿಗಳ ಜೊತೆ ಮಾತುಕತೆಗೆ ಕೂರುತ್ತಿದ್ದರು.
ಈ ವೇಳೆ ಅವರು ಕೇಳುತ್ತಿದ್ದ ಪ್ರಶ್ನೆ ಒಂದೇ ಒಂದು.. ‘ನೀವು ನಿಮ್ಮ ಕೆಲಸವನ್ನು ಸಮರ್ಥಿಸಿಕೊಳ್ಳುತ್ತೀರಾ?’ ಈ ಪ್ರಶ್ನೆಗೆ ಉದ್ಯೋಗಿಗಳು ಥರಹೇವಾರ ಉತ್ತರ ನೀಡಿರಬಹುದು. ಆದರೆ ಅಂತಿಮವಾಗಿ ರಾಜೀನಾಮೆ ತೆಗೆದುಕೊಳ್ಳುವ ಮೂಲಕ ಮೀಟಿಂಗ್ ಅಂತ್ಯವಾಗುತ್ತಿತ್ತು ಎನ್ನಲಾಗಿದೆ. ಹಂತ ಹಂತವಾಗಿ ಇಡೀ ತಂಡದ ಗಾತ್ರವನ್ನೇ ಎಲಾನ್ ಮಸ್ಕ್ ಕಡಿತ ಮಾಡಿದಾಗ ಒಂದು ಹಂತದಲ್ಲಿ ಸಂಸ್ಥೆಯಲ್ಲಿ ಅವ್ಯವಸ್ಥೆಯ ಪರಿಸ್ಥಿತಿ ಎದುರಾಗಿತ್ತು ಎಂದೂ ಟೆಲಿಗ್ರಾಫ್ ವಿವರಿಸಿದೆ. ಟ್ವಿಟ್ಟರ್ ಖರೀದಿ ಮಾಡಿದ ಬಳಿಕ ಮೊದಲ ಭಾಷಣದಲ್ಲೇ ಎಲಾನ್ ಮಸ್ಕ್ ಅವರು. ‘ನೀವು ಹೆಚ್ಚಿನ ಹಣ ಗಳಿಕೆ ಮಾಡಬೇಕು, ಇಲ್ಲವಾದ್ರೆ ದಿವಾಳಿ ಆಗುವ ಸಾಧ್ಯತೆ ಇದೆ’ ಎಂದು ಹೇಳಿದ್ದರಂತೆ. ಜೊತೆಗೆ ವಾರಕ್ಕೆ 80 ಗಂಟೆಗಳ ಕೆಲಸದ ನೀತಿಯಲ್ಲಿ ಬದಲಾವಣೆ ಮಾಡಲಾಯ್ತು. ಕಚೇರಿಯ ಕೆಲವು ಸೌಲಭ್ಯಗಳಾದ ಉಚಿತ ಊಟ ಸೇರಿದಂತೆ ಹಲವು ಸೌಕರ್ಯಗಳಿಗೆ ಮಸ್ಕ್ ಕತ್ತರಿ ಹಾಕಿದರು ಎನ್ನಲಾಗಿದೆ. ಇದಲ್ಲದೆ ಕೋವಿಡ್ ಕಾಲದಲ್ಲಿ ಆರಂಭವಾಗಿದ್ದ ವರ್ಕ್ ಫ್ರಂ ಹೋಂ ಸೌಲಭ್ಯವೂ ಕಡಿತವಾಯ್ತು.
				
															
                    
                    
                    
                    
































