ಮದುವೆಗೆ ಹೋಗುವಾಗ ನದಿಗೆ ಟ್ರಕ್ ಉರುಳಿ ಬಿದ್ದ ಪರಿಣಾಮ ಮಕ್ಕಳು ಸೇರಿದಂತೆ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ಆಫ್ರಿಕಾದ ಇಥಿಯೋಪಿಯಾದಲ್ಲಿ ನಡೆದಿದೆ.
ಇಥಿಯೋಪಿಯದಲ್ಲಿ ಪ್ರಯಾಣಿಕರು ತುಂಬಿದ್ದ ಟ್ರಕ್ ನದಿಗೆ ಬಿದ್ದಿದೆ. ಅಪಘಾತದಲ್ಲಿ 60 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದಕ್ಷಿಣ ಸಿಡಾಮಾ ಪ್ರದೇಶದ ಅಧಿಕಾರಿಗಳ ಪ್ರಕಾರ, ಬೋನಾ ಜಿಲ್ಲೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರು ಬೋನಾ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಾದೇಶಿಕ ಸಂವಹನ ಬ್ಯೂರೋ ಭಾನುವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರಿ ಸ್ವಾಮ್ಯದ ಇಥಿಯೋಪಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಇಬಿಸಿ) ಪ್ರಕಾರ, ಎಲ್ಲಾ ಜನರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಇಥಿಯೋಪಿಯಾದಲ್ಲಿ ಗಂಭೀರವಾದ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ.ಕಳಪೆ ಚಾಲನಾ ಗುಣಮಟ್ಟ ಮತ್ತು ಶಿಥಿಲಗೊಂಡ ವಾಹನಗಳು ಇಲ್ಲಿ ಸುರಕ್ಷಿತ ಸಾರಿಗೆಗೆ ದೊಡ್ಡ ಅಡಚಣೆಗಳಾಗಿವೆ.
ಝನದಿಯಲ್ಲಿ ಜನರಿಗಾಗಿ ಶೋಧ ಮುಂದುವರಿದಿದೆ ಎಲ್ಲಾ ಜನರು ಇಸುಜು ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಏಕಾಏಕಿ ಟ್ರಕ್ ದಾರಿ ತಪ್ಪಿ ನದಿಗೆ ಬಿದ್ದಿದೆ. ಮತ್ತೊಂದೆಡೆ ನದಿಯಲ್ಲಿ ಜನರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳೀಯ ಜನರು ಮತ್ತು ಸರ್ಕಾರಿ ಇಲಾಖೆಗಳು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ.