ವಿಜಯಪುರ : ಕಾಂಗ್ರೆಸ್‌ನ ಸಾಕಷ್ಟು ಜನ ನಮಗೆ ಅಪ್ರೋಚ್ ಮಾಡಿದ್ದರು, 60 ಜನ ನಮ್ಮೊಟ್ಟಿಗೆ ಬರಲು ತಯಾರಾಗಿದ್ದರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಆಗುತ್ತಿಲ್ಲ. ಹೀಗಾಗಿ ನಮ್ಮ ಕ್ಷೇತ್ರಕ್ಕೆ ದುಡ್ಡು ಸಿಗುತ್ತಿಲ್ಲ ಎಂದು ನನ್ನ ಜೊತೆ ಸಾಕಷ್ಟು ಜನ ಮಾತನಾಡಿದರು. ಸಾಕಷ್ಟು ಜನ ನಮಗೆ ಅಪ್ರೋಚ್ ಮಾಡಿ, ನಾವು ಒಂದಿಷ್ಟು ಜನ ಕಾಂಗ್ರೆಸ್ ಬಿಟ್ಟು ಬರ್ತೀವಿ ಎಂದು ಹೇಳಿದ್ದರು. ಜೊತೆಗೆ ಕಾಂಗ್ರೆಸ್ ಸರ್ಕಾರವನ್ನು ತೆಗೆದು ಹಾಕೋಣ ಎಂದಿದ್ದರು. ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರ ಉರುಳಿಸಲು ಪ್ಲಾನ್ ನಡೆದಿತ್ತಾ? ಎಂದು ಪ್ರಶ್ನಿಸಿದರು.
ಈ ಸಂದರ್ಭ ಸತೀಶ್ ಜಾರಕಿಹೊಳಿ ಟೀಂ ವಿದೇಶ ಪ್ರಯಾಣ ವಿಚಾರವಾಗಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಸಿಎಂ ಪರವಾಗಿರುವ ವ್ಯಕ್ತಿ. ಇದರ ಹಿಂದೆ ಸಿದ್ದರಾಮಯ್ಯನವರೇ ಇರಬಹುದು. ಇನ್ನೂ ಕಳೆದ ವರ್ಷವೇ ಸತೀಶ್ ಜಾರಕಿಹೊಳಿ ಬೆಂಬಲಿಗರು ದುಬೈಗೆ ಹೋಗುವ ಪ್ಲಾನ್ ಇತ್ತು. ಸತೀಶ್ ಜಾರಕಿಹೊಳಿ ಹಾಗೂ ಸಿದ್ದರಾಮಯ್ಯನವರು ಎಲ್ಲರೂ ಒಂದೇ ಆಗಿದ್ದಾರೆ. ಅಲ್ಲಿ ಎಲ್ಲವೂ ಸಿದ್ದರಾಮಯ್ಯನವರ ನಿರ್ದೇಶನದಂತೆ ನಡೆಯುತ್ತದೆ. ಒಟ್ಟಾರೆ ಕಾಂಗ್ರೆಸ್‌ನಲ್ಲಿ ಗುಂಪು ರಾಜಕೀಯಕ್ಕೆ ರಾಷ್ಟ್ರೀಯ ಅಧ್ಯಕ್ಷರು ಎಚ್ಚರಿಕೆ ಕೊಟ್ಟರೂ ಸಹ ಕೇರ್ ಮಾಡುತ್ತಿಲ್ಲ. ಇದರ ಅರ್ಥ ಸರ್ಕಾರದಲ್ಲಿ ಅಸಮಾಧಾನದ ಹೊಗೆ ಇದೆ ಎಂದರ್ಥ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಕಾರ್ಯಕರ್ತರನಿಗೂ ನಿಲ್ಲುವ ಹಕ್ಕಿದೆ. ವಿಜಯೇಂದ್ರ ಸ್ಪರ್ಧೆ ಮಾಡುತ್ತಿದ್ದರೆ ಮಾಡಲಿ, ಚುನಾವಣೆ ಆಗಿದ್ದೇ ಆದಲ್ಲಿ ನಾವು ಕೂಡ ಯೋಚನೆ ಮಾಡಿದ್ದೇವೆ, ಅದನ್ನು ಆಗ ಪ್ರಕಟಣೆ ಮಾಡುತ್ತೇವೆ. ಚುನಾವಣೆ ನಡೆದರೆ ರ‍್ಯಾರು ಸ್ಪರ್ಧಿಸುತ್ತಾರೆ ಎಂದು ನೋಡಬೇಕು. ನಮ್ಮ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಗುಂಪಿನಲ್ಲಿ ಚರ್ಚೆ ಮಾಡುತ್ತೇವೆ. ಸದ್ಯ ಈಗಿನ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆ ಆಗುತ್ತಿದೆ. ಅದು ಪಾರದರ್ಶಕವಾಗಿ ನಡೆಯಬೇಕು. ಮುಂದೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾಧ್ಯಕ್ಷರುಗಳು ಮತದಾನ ಮಾಡುತ್ತಾರೆ. ಆಗ ಅವರಿಗೆ ಒತ್ತಡ ಹೇರಿದಂತಾಗುತ್ತದೆ ಎಂದು ತಿಳಿಸಿದರು.