ಬೆಂಗಳೂರು : ಎಟಿಎಂಗೆ ಹಣ ಪೂರೈಸುತ್ತಿದ್ದ ವಾಹನ ಅಡ್ಡಗಟ್ಟಿ ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿಗಳನ್ನ ಗ್ಯಾಂಗ್ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿರುವ ಓರ್ವ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್ ಎಂಬಾತನನ್ನು ದಕ್ಷಿಣ ವಿಭಾಗದ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್ ಇಡೀ ಕೃತ್ಯದ ಮಾಸ್ಟರ್ ಮೈಂಡ್ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ಗ್ಯಾಂಗ್ಯೊಂದನ್ನು ರೆಡಿ ಮಾಡಿದ್ದ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್, ದರೋಡೆ ಕುರಿತು ತರಬೇತಿ ನೀಡಿದ್ದರು. ಹೇಗೆ ರಾಬರಿ ಮಾಡಬೇಕು? ಹೇಗೆ ತಪ್ಪಿಸಿಕೊಳ್ಳಬೇಕೆಂದು ಟ್ರೈನಿಂಗ್ ಕೂಡ ಕೊಟ್ಟಿದ್ದರು ಹಾಗೂ ಪೊಲೀಸರು ಹೇಗೆ ಕೆಲಸ ಮಾಡುತ್ತಾರೆಂದು ಸಹ ತಿಳಿಸಿದ್ದರು ಎನ್ನಲಾಗಿದೆ.
ಪ್ಲಾನ್ ಮಾಡಿದಂತೆ ಕಮ್ಮನಹಳ್ಳಿ, ಕಲ್ಯಾಣನಗರದ ತಂಡವು ಹಣ ಸಾಗಿಸುತ್ತಿದ್ದ ಸಿಎಂಎಸ್ ಸೆಕ್ಯುರಿಟಿ ಏಜೆನ್ಸಿ ವಾಹನವನ್ನು ತಡೆದು 7.11 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿದೆ. ಸಿಎಂಎಸ್ನ ಮಾಜಿ ಉದ್ಯೋಗಿಗಳು ಸಹ ಇದರಲ್ಲಿ ಭಾಗಿಯಾಗಿದ್ದು, ಕದ್ದ ಹಣವನ್ನು ಪರಾರಿಯಾಗುವ ಮೊದಲು ಬೆಂಗಳೂರಿನಲ್ಲಿ ಎಲ್ಲೋ ಬಚ್ಚಿಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
24 ಗಂಟೆಗಳ ಒಳಗೆ ಆರೋಪಿಗಳನ್ನು ಪತ್ತೆಹಚ್ಚುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ನಿರ್ದೇಶಿಸಿದ್ದರು. ಅದರಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸುಳಿವುಗಳನ್ನು ಸಂಗ್ರಹಿಸಿದ ತಕ್ಷಣ ಶಂಕಿತರ ಫೋಟೋಗಳನ್ನು ಬಿಡುಗಡೆ ಮಾಡಿದ್ದರು.
































