ನವದೆಹಲಿ: ಸೇನಾ ಕರ್ತವ್ಯದ ನಿಮಿತ್ತ ಚೆನ್ನೈಯ ತಾಂಬರಂ ವಾಯುನೆಲೆಯಿಂದ ಅಂಡಮಾನ್‌ನ ಪೋರ್ಟ್‌ಬ್ಲೇರ್‌ಗೆ 2016ರ ಜುಲೈ 22ರಂದು ಪ್ರಯಾಣ ಬೆಳೆಸಿದ್ದ ಭಾರತೀಯ ವಾಯುಸೇನೆಯ ಎಎನ್-32-2743 ಯುದ್ಧ ವಿಮಾನ ಬಂಗಾಲಕೊಲ್ಲಿ ಸಮುದ್ರದ ಮೇಲೆ ಹಾರುತ್ತಿದ್ದಾಗ ಸಂಪರ್ಕ ಕಡಿತಗೊಂಡು, ನಾಪತ್ತೆಯಾಗಿತ್ತು. ಬೆಳಗ್ಗೆ 8.30ಕ್ಕೆ ವಿಮಾನ ಹೊರಟಿದ್ದು, 9.12ಕ್ಕೆ ನಿಲ್ದಾಣದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. 11.45ಕ್ಕೆ ಪೋರ್ಟ್‌ಬ್ಲೇರ್‌ಗೆ ತಲುಪಬೇಕಿದ್ದ ವಿಮಾನ ಕಣ್ಮರೆಯಾಗಿರುವುದಾಗಿ ಮಧ್ಯಾಹ್ನ 1.50ಕ್ಕೆ ವಾಯುಸೇನೆ ಪ್ರಕಟಿಸಿತ್ತು. ಅದರಲ್ಲಿದ್ದ ಗುರುವಾಯನಕೆರೆಯ ಏಕನಾಥ ಶೆಟ್ಟಿ ಸೇರಿ 29 ಜನ ಸೈನಿಕರ ಸುಳಿವು ಸಿಕ್ಕಿರಲಿಲ್ಲ. ಈ ಘಟನೆ ನಡೆದು 7.5 ವರ್ಷಗಳೇ ಕಳೆದಿವೆ.
ಇದೀಗ ಬಂಗಾಳಕೊಲ್ಲಿಯ ಸಮುದ್ರದಲ್ಲಿ 3.4 ಕಿ.ಮೀ ಆಳವಾದಲ್ಲಿ ವಿಮಾನ ಪತ್ತೆಯಾಗಿದೆ. ನ್ಯಾಶನಲ್ ಇಸ್ಟ್ರಿಟ್ಯೂಶನ್ ಆಫ್ ಒಶಿಯನ್ ಟೆಕ್ನಾಲಜಿ ಸಂಸ್ಥೆಯು ಸಮುದ್ರದ ಆಳದಲ್ಲಿ ನಿಯೋಜಿಸಿರುವ ಡ್ರೋನ್, ಅವಷೇಶಗಳ ಚಿತ್ರವನ್ನು ಸೆರೆಹಿಡಿದಿದ್ದು ಅದನ್ನಿ ಪರಿಶೀಲಿಸಿದಾಗ ಸೇನೆಯ ಎಎನ್-32-2743 ಯುದ್ಧ ವಿಮಾನ ಎಂಬುವುದು ದೃಢಪಟ್ಟಿದೆ ಎಂದು ಸೇನೆ ತಿಳಿಸಿದೆ.
ಏಳೂವರೆ ವರ್ಷಗಳ ಹಿಂದೆ , ವಿಮಾನ ನಾಪತ್ತೆಯಾದಾಗ ಕೇಂದ್ರ ಸರಕಾರ ಹಾಗೂ ಮಿಲಿಟರಿ ತಜ್ಞರು ಸತತ ಮೂರು ತಿಂಗಳು ನಡೆಸಿದ ಪ್ರಯತ್ನ ವಿಫಲವಾಗಿತ್ತು. ಇದಕ್ಕಾಗಿ ಪಿ-8ಎ ವಿಮಾನ, 3 ಡೋರ್ನಿಯರ್ ವಿಮಾನ, ಒಂದು ಜಲಂತರ್ಗಾಮಿ, ನೌಕಾಸೇನೆಯ 12 ನೌಕೆಗಳನ್ನು ಬಳಸಲಾಗಿತ್ತು. ಕುರುವೇ ಇಲ್ಲದಂತೆ ನಾಪತ್ತೆಯಾಗಿದ್ದ ಮೊದಲ ವಿಮಾನವಾಗಿತ್ತು. ಕೊನೆಗೂ ವಿಮಾನ ಅವಶೇಷವಾಗಿ ಪತ್ತೆಯಾಗಿದೆ.