ಮದುವೆಯಾಗಿ 44 ವರ್ಷದ ನಂತರ, 18 ವರ್ಷ ಕೋರ್ಟ್ನಲ್ಲಿ ಹೋರಾಡಿ ಕೊನೆಗೂ ಈ ವೃದ್ಧ ದಂಪತಿ ವಿಚ್ಛೇದನ ಪಡೆದಿರುವ ಘಟನೆ ಹರಿಯಾಣದ ಕರ್ನಾಲ್ನಲ್ಲಿ ನಡೆದಿದೆ. ಪತಿಗೆ 70 ವರ್ಷ, ಪತ್ನಿಗೆ 73 ವರ್ಷ. ಪರಿಹಾರ ಮೊತ್ತವಾಗಿ ತನ್ನ ಜಮೀನನ್ನೇ ಈ ವೃದ್ಧ ಮಾರಾಟ ಮಾಡಿದ್ದಾನೆ.
1980 ರಲ್ಲಿ ಇವರಿಬ್ಬರ ಮದುವೆಯಾಗಿತ್ತು. ಸುಂದರ ಸಂಸಾರ ನಡೆಸುತ್ತಿದ್ದ ಇವರಿಗೆ ಒಬ್ಬ ಮಗ, ಇಬ್ಬರು ಹೆಣ್ಮಕ್ಕಳಿದ್ದಾರೆ. 2006 ರಲ್ಲಿ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಲು ಶುರುವಾಗಿದೆ. ಅನಂತರ ಪತಿ ಮತ್ತು ಪತ್ನಿ ಬೇರೆ ವಾಸ ಮಾಡಲು ಶುರು ಮಾಡಿದ್ದಾರೆ. ಪತ್ನಿಗೆ ವಿಚ್ಛೇದನ ನೀಡಲು ಪತಿ ಬಯಸಿದ್ದ. ಹೋರಾಟ ಮಾಡಿ, 18 ವರ್ಷ ಕಾದು ವಿಚ್ಛೇದನ ಪಡೆದುಕೊಂಡಿದ್ದಾರೆ.
ಈ ವರ್ಷ ನವೆಂಬರ್ 4 ರಂದು ಹೈಕೋರ್ಟ್ ರಾಜಿ ಸಂಧಾನ ಮತ್ತು ಇತ್ಯರ್ಥಕ್ಕಾಗಿ ಮಧ್ಯಸ್ಥಿಕೆ ಕೇಂದ್ರಕ್ಕೆ ಕಳುಹಿಸಿದೆ. ಆದರೆ, ಪತಿ, ಪತ್ನಿ ಮತ್ತು ಅವರ ಮೂವರು ಮಕ್ಕಳು 3.07 ಕೋಟಿ ರೂಪಾಯಿ ಪಾವತಿಸಿ ಮದುವೆಯನ್ನು ಅಂತ್ಯಗೊಳಿಸಲು ಒಪ್ಪಿಕೊಂಡರು. 3.07 ಕೋಟಿ ಮೊತ್ತವನ್ನು ಶಾಶ್ವತ ಜೀವನಾಂಶವೆಂದು ಪರಿಗಣಿಸಲಾಗುವುದು ಎಂದು ಒಪ್ಪಂದದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಮೊತ್ತದ ನಂತರ, ಹೆಂಡತಿ ಮತ್ತು ಮಕ್ಕಳು ಪತಿ ಅಥವಾ ಅವನ ಆಸ್ತಿಯ ಮೇಲೆ ಯಾವುದೇ ಹಕ್ಕುಗಳನ್ನು ಹೊಂದಿರುವುದಿಲ್ಲ. ಗಂಡನ ಮರಣದ ನಂತರವೂ ಅವನ ಆಸ್ತಿಯಲ್ಲಿ ಹೆಂಡತಿ ಮತ್ತು ಮಕ್ಕಳು ಹಕ್ಕು ಪಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ರೈತನಾಗಿರುವ ಈ ವೃದ್ಧ, ವಿಚ್ಛೇದನದ ಸಮಯದಲ್ಲಿ ಪತ್ನಿ ದೊಡ್ಡ ಮೊತ್ತವನ್ನೇ ಪರಿಹಾರವಾಗಿ ಕೇಳಿದ್ದಾಳೆ. ಪತ್ನಿ ಮತ್ತು ಮಕ್ಕಳಿಗಾಗಿ ರೈತ 3.07 ಕೋಟಿ ರೂ. ನೀಡಲು ಸಿದ್ಧನಾಗಿದ್ದಾನೆ. ಇದಕ್ಕಾಗಿ ತನ್ನ ಜಮೀನು ಮಾರಾಟ ಮಾಡಿದ್ದು, ಇದರಿಂದ 2ಕೋಟಿ 50 ಲಕ್ಷ ಹಣವನ್ನು ಡಿಡಿ ಮಾಡಿ ಪತ್ನಿಗೆ ನೀಡಿದ್ದಾನೆ. 40 ಲಕ್ಷ ಮೌಲ್ಯದ ಚಿನ್ನಾಭರಣವನ್ನೂ, ಬೆಳೆ ಮಾರಾಟದ ಹಣವನ್ನು ಕೂಡಾ ಈತ ಪತ್ನಿಗೆ ಪರಿಹಾರವಾಗಿ ನೀಡಿದ್ದಾನೆ. ನ್ಯಾಯಮೂರ್ತಿ ಸುಧೀರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರ ಪೀಠವು ಒಪ್ಪಂದವನ್ನು ಅಂಗೀಕರಿಸಿತು ಮತ್ತು ಈ ಆದೇಶವನ್ನು ನೀಡಿದೆ. ಕಾನೂನು ಪ್ರಕ್ರಿಯೆ ಮತ್ತು ಮಧ್ಯಸ್ಥಿಕೆಯ ಮೂಲಕ ಬಹಳ ವರ್ಷಗಳಷ್ಟು ಹಳೆಯ ವಿವಾದಗಳನ್ನು ಸಹ ಶಾಂತಿಯುತವಾಗಿ ಪರಿಹರಿಸಬಹುದು ಎಂದು ಈ ಪ್ರಕರಣವು ತೋರಿಸಿದೆ.