ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲ ಬೇಗೆಯ ನಡುವೆ ಮುಂದಿನ ಒಂದು ವಾರ ನಾನಾ ಭಾಗಗಳಲ್ಲಿ ಮಳೆಯಾಗುವ ಖುಷಿ ವಿಚಾರವಿದು. ಬಹುತೇಕ ಎರಡು ತಿಂಗಳಿನಿಂದ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ, ಮಲೆನಾಡು, ಬೆಂಗಳೂರು ಸೇರಿದಂತೆ ಎಲ್ಲೆಡೆ ಬಿಸಿಲಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.
ಜನ ಮಳೆ ನಿರೀಕ್ಷೆಯಲ್ಲಿರುವ ನಡುವೆ ಒಂದು ವಾರದಿಂದ ಕೊಡಗು, ಚಿಕ್ಕಮಗಳೂರು, ಮೈಸೂರು ಭಾಗದಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಈಗ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ಒಂದು ವಾರದ ಅವಧಿಯಲ್ಲಿ ಲಘು ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ನೀಡಿದೆ. ಇದರಿಂದ ಕಲಬುರಗಿ ಸೇರಿದಂತೆ ಹಲವು ಭಾಗದಲ್ಲಿ ಬಿಸಿಲಿನಿಂದ ಬಳಲಿರುವ ಜನರಿಗೆ ಕೊಂಚ ನಿರಾಳತೆಯನ್ನು ಮಳೆ ತರಬಹುದು.
ಇದಲ್ಲದೇ ಕೊಡಗಿನಲ್ಲಿ ಗುಡುಗು ಸಹಿತ ಕೊಂಚ ಜೋರಾದ ಮಳೆಯೇ ಆಗಬಹುದು ಎನ್ನುವ ಸೂಚನೆಯಿದೆ. ಶುಕ್ರವಾರದಂದು ಕೊಡಗು ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಗುಡುಗು ಸಹಿತ ಆಗುವ ಮುನ್ಸೂಚನೆಯಿದೆ. ಇದಲ್ಲದೇ ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ಹಳೆ ಮೈಸೂರು ಭಾಗದ ಚಾಮರಾಜನಗರ, ಮೈಸೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಪ್ರತ್ಯೇಕ ಭಾಗಗಳಲ್ಲಿ ಲಘು ಮಳೆಯಾಗಲಿದ್ದು,ಗುಡುಗು ಕೂಡ ಇರಲಿದೆ.
ಮಾರ್ಚ್ 22 ರ ಶನಿವಾರದಂದು ಕೊಡಗು ಜಿಲ್ಲೆಯ ಪ್ರತ್ಯೇಕ ಸ್ಥಗಳಲ್ಲಿ ಹಗುರದಿಂದ ಸಾಧಾರಣೆ ಮಳೆಯಾಗಲಿದೆ. ಗುಡುಗು ಸಹಿತ ಮಳೆಯೂ ಇರಲಿದೆ. ಇದಲ್ಲದೇ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಚಾಮರಾಜನಗರ, ಮೈಸೂರು, ಹಾಸನ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗಲಿದೆ. ಕರ್ನಾಟಕದ ಒಳನಾಡನ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿಯು ಬೀಸುವ ಸಾಧ್ಯತೆಯಿದೆ.