ನವದೆಹಲಿ : ದೇಶಾಧ್ಯಂತ ಸ್ವಾತಂತ್ಯ್ರೋತ್ಸವದ ಸಂಭ್ರಮ. ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಬಾನೆತ್ತರಕ್ಕೆ ಹಾರುವುದರ ಜೊತೆಗೆ ದೇಶೋದ್ಘಾರದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ದೇಶಭಕ್ತರನ್ನು ಎಚ್ಚರಿಸಿದಂತಿತ್ತು. ದೇಶದ ಪ್ರಜೆಗಳಿಗಾಗಿ ನಮೋ ಹೇಳಿದ ಮಾತುಗಳ ಸಂಕ್ಷಿಪ್ತ ವಿವರ ಇಲ್ಲಿದೆ.
1. ನೆರೆಯ ಬಾಂಗ್ಲಾ ದೇಶದ ಸುರಕ್ಷತೆಗೆ ಆಧ್ಯತೆ:
ಸದ್ಯ ಬಾಂಗ್ಲಾದೇಶದ ಪರಿಸ್ಥಿತಿಯ ಕುರಿತು ಎಲ್ಲರಿಗೂ ತಿಳಿದಿದೆ. ಇದೇ ವಿಚಾರವಾಗಿ ಕಾಳಜಿ ವಹಿಸಿರುವ ನಮೋ , ಬಾಂಗ್ಲಾದೇಶದ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸುತ್ತದೆ ಎಂದು ಆಶಿಸಿದ್ದಾರೆ. ಬಾಂಗ್ಲಾದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಭಾರತ ಯಾವಾಗಲೂ ಬೆಂಬಲ ನೀಡಲಿದೆ ಎಂದು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮೋದಿ ಹೇಳಿದ್ದಾರೆ.
ನೆರೆಯ ರಾಷ್ಟ್ರ, ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದರ ಬಗ್ಗೆ ಕಾಳಜಿ ವಹಿಸುವುದು ಕರ್ತವ್ಯ, ಆದಷ್ಟು ಬೇಗ ಅಲ್ಲಿ ಪರಿಸ್ಥಿತಿ ಸಹಜವಾಗಲಿ ಎಂದು ಆಶಿಸುತ್ತೇನೆ. ಅಲ್ಲಿನ ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು 140 ಕೋಟಿ ದೇಶವಾಸಿಗಳ ಕಾಳಜಿ – ಭಾರತವು ಯಾವಾಗಲೂ ನಮ್ಮ ನೆರೆಯ ದೇಶಗಳು ಸಮೃದ್ಧಿ ಮತ್ತು ಶಾಂತಿಯ ಹಾದಿಯಲ್ಲಿ ನಡೆಯಬೇಕೆಂದು ಬಯಸುತ್ತದೆ. ನಾವು ಶಾಂತಿಗೆ ಬದ್ಧರಾಗಿದ್ದೇವೆ. ನಾವು ಮಾನವಕುಲದ ಕಲ್ಯಾಣದ ಬಗ್ಗೆ ಯೋಚಿಸುತ್ತೇವೆ ಎಂಬುವುದಾಗಿ ಹೇಳಿದರು.
2. ಮಹಿಳಾ ಅಭಿವೃದ್ಧಿಗೆ ಆಧ್ಯತೆ:
ತಮ್ಮ ಸರ್ಕಾರವು “ಮಹಿಳಾ ನೇತೃತ್ವದ ಅಭಿವೃದ್ಧಿ ಮಾದರಿ” ಯಲ್ಲಿ ಕೆಲಸ ಮಾಡಿದೆ, ಅವರ ಮೇಲಿನ ದೌರ್ಜನ್ಯವನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ ಪ್ರಧಾನಿ, ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯದ ಘಟನೆಗಳ ಬಗ್ಗೆ ತಮ್ಮ ಭಾಷಣದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
3. ಕೃಷಿ ಕ್ಷೇತ್ರಕ್ಕೆ ಆಧ್ಯತೆ:
ಕೃಷಿ ಕ್ಷೇತ್ರದಲ್ಲಿ ಪ್ರಮುಖ ಸುಧಾರಣೆಗಳ ಅಗತ್ಯವಿದೆ. ರೈತರ ಜೀವನ ಉತ್ತಮಗೊಳಿಸುವ ಪ್ರಯತ್ನಕ್ಕೆ ಒತ್ತು ನೀಡುತ್ತೇವೆ ಎಂದು ಹೇಳಿ ಸಾವಯವ ಕೃಷಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ರೈತರನ್ನು ಅಭಿನಂದಿಸಿ ವಿಕಸಿತ್ ಭಾರತ್ ನಮ್ಮ ಗುರಿ ಎಂದು ಹೇಳಿದರು.
4. ಒಂದು ರಾಷ್ಟ್ರ ಒಂದು ಚುನಾವಣೆ :
ದೇಶದಲ್ಲಿ “ಒಂದು ರಾಷ್ಟ್ರ ಮತ್ತು ಒಂದು ಚುನಾವಣೆ” ತರಲು ಪ್ರಧಾನಿ ಮೋದಿ ಒತ್ತು ನೀಡಿದರು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕಲ್ಯಾಣ ಯೋಜನೆಯು ಚುನಾವಣೆಗಳೊಂದಿಗೆ ಸಂಬಂಧ ಹೊಂದಿದೆ. ದೇಶದಲ್ಲಿ ನಿರಂತರ ಚುನಾವಣೆಗಳು ಅಭಿವೃದ್ಧಿಯಲ್ಲಿ ತಲೆದೋರುತ್ತಿವೆ. ದೇಶದ ಕಲ್ಯಾಣ ಯೋಜನೆ ಚುನಾವಣೆಗೆ ಸಂಬಂಧಿಸಿದೆ ಎಂದು ಹೇಳಿದರು.
5. ವ್ಯಾಪಾರ ವಹಿವಾಟುಗಳಿಗೆ ಉತ್ತೇಜನ:
ಅನೇಕ ಜಾಗತಿಕ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತವೆ. ಅವರನ್ನು ಆಕರ್ಷಿಸುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ರಾಜ್ಯ ಸರ್ಕಾರ ಶ್ರಮಿಸಬೇಕು ಎಂದು ಹೇಳಿದರು. ಭಾರತದಲ್ಲಿ ಹೂಡಿಕೆ ವಿಚಾರಕ್ಕೆ ಪ್ರಾಶಸ್ತ್ಯ ನೀಡಿದರು.
ಇವೆಲ್ಲವುದರ ಜೊತೆಗೆ ವೈದ್ಯಕೀಯ ಸೀಟು ಹಂಚಿಕೆ , ಭ್ರಷ್ಟಾಚಾರ, ಪ್ರತಿಪಕ್ಷಗಳ ವಾಗ್ದಾಳಿಗಳ ಕುರಿತು ಭಾಷಣದಲ್ಲಿ ಉಲ್ಲೇಖಿಸಿದರು. ಸುದೀರ್ಘ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ಅನೇಕ ವಿಚಾರಗಳ ಕುರಿತು ವಿಮರ್ಶಾತ್ಮಮಕವಾಗಿ ಮಾತನಾಡಿದರು.