ಒಡಿಶಾ: ಕೊಳವೆ ಬಾವಿಯಲ್ಲಿ 20 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ನವಜಾತ ಹೆಣ್ಣು ಮಗುವನ್ನು ರಕ್ಷಿಸಿದ ಘಟನೆ ಒಡಿಶಾದ ಸಂಬಲ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸತತ ಎಂಟು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ ನಂತರ ಮಗುವನ್ನು ರಕ್ಷಿಸಿ ಅಗತ್ಯ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಲ್‌ಪುರ ಜಿಲ್ಲೆಯ ರೆಂಗಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಲಾರಿಪಾಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒಡಿಶಾ ಅಗ್ನಿಶಾಮಕ ಸೇವೆಗಳು ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳ ಸತತ ಕಾರ್ಯಾಚರಣೆಯ ನಂತರ ಹಸುಗೂಸನ್ನು ರಕ್ಷಿಸಲಾಯಿತು.
ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಗುವಿನ ಅಳುತ್ತಿರುವ ಶಬ್ದ ಕೇಳಿ ಗ್ರಾಮಸ್ಥರು, ಹುಡುಕಾಡಿದಾಗ ಬೋರ್ ವೆಲ್‌ನಲ್ಲಿ ಮಗು ಸಿಕ್ಕಿ ಬಿದ್ದಿರುವುದು ಖಚಿತವಾಗಿದೆ. ತಕ್ಷಣ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಮತ್ತು ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಮಗುವಿಗೆ ಆಮ್ಲಜನಕವನ್ನು ಪೂರೈಸಿದ್ದಾರೆ.
ಭುವನೇಶ್ವರದಿಂದ ಘಟನ ಸ್ಥಳಕ್ಕೆ ವಿಶೇಷ ವಿಮಾನದ ಮೂಲಕ ಕ್ಯಾಮರಾ, ತಂತ್ರಜ್ಞರನ್ನು ಕರೆಸಲಾಯಿತು. ಮಗುವಿನ ರಕ್ಷಣೆಗೆ ಬೋರ್‌ವೆಲ್ ಒಳಗೆ ಬೆಚ್ಚಗಾಗಲು ಬಲ್ಬ್ ಉರಿಸಲಾಯಿತು. ಹಲವು ತಂಡಗಳ ಸತತ ಪ್ರಯತ್ನದಿಂದ ಮಗುವನ್ನು ಕೊನೆಗೂ ಯಶಸ್ವಿಯಾಗಿ ರಕ್ಷಿಸಲಾಯಿತು.
ಯಾರೋ ತಿಳಿದೇ ನವಜಾತ ಶಿಶುವನ್ನು ಬೋರ್‌ವೆಲ್‌ನಲ್ಲಿ ಎಸೆದು ಹೋಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಸ್ಥಳೀಯರ ಪ್ರಕಾರ, ಈ ಕೊಳವೆಬಾವಿ ಹಲವು ವರ್ಷಗಳಿಂದ ಪಾಳು ಬಿದ್ದಿದ್ದು, ಇದು. ಇದು ನಿರ್ಜನ ಪ್ರದೇಶದಲ್ಲಿರುವುದರಿಂದ ಯಾರೂ ಅದರತ್ತ ಹೆಚ್ಚಿನ ಗಮನ ಹರಿಸಿರಲಿಲ್ಲ