ಲಕ್ನೋ: ಉತ್ತರಪ್ರದೇಶದ ಇಟಾನ್ ನಲ್ಲಿ ನಡೆದ ಮೂರನೇ ಹಂತದ ಮತದಾನದ ವೇಳೆ ಯುವಕನೊಬ್ಬ ಒಂದೇ ಬೂತ್ ನಲ್ಲಿ 8 ಬಾರಿ ಮತದಾನ ಮಾಡಿದ್ದಾನೆ. ತಾನು ಮತದಾನ ಮಾಡಿದ ಪ್ರತಿ ಬಾರಿಯೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
8 ಬಾರಿ ಮತದಾನ ಮಾಡಿದ ಆರೋಪಿಯನ್ನು ರಾಜನ್ ಸಿಂಗ್ ಎಂದು ಗುರುತಿಸಲಾಗಿದೆ. ವೈರಲ್ ಆದ ಈ ವಿಡಿಯೋವನ್ನು ಕಾಂಗ್ರೆಸ್ ಪಕ್ಷದ ಹಲವು ನಾಯಕರು ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿ ರಾಜನ್ ಸಿಂಗ್ ನನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಅವರು ತಿಳಿಸಿದ್ದಾರೆ. ಜೊತೆಗೆ ಚುನಾವಣಾ ತಂಡದಲ್ಲಿದ್ದ ಎಲ್ಲಾ ಸದಸ್ಯರನ್ನು ಅಮಾನತುಗೊಳಿಸಿ ಮರು ಮತದಾನಕ್ಕೆ ಶಿಫಾರಸ್ಸು ಮಾಡಲಾಗಿದೆ.
ಇನ್ನು ವೈರಲ್ ಆದ ಈ ವಿಡಿಯೋವು 2 ನಿಮಿಷ 20 ಸೆಕೆಂಡ್ ಇದ್ದು, ವಿಡಿಯೋದಲ್ಲಿ ಆರೋಪಿ ಪ್ರತಿ ಬಾರಿಯೂ ಮತದಾನ ಮಾಡಿದ್ದಾನೆ. ಆತ ಬಿಜೆಪಿ ಅಭ್ಯರ್ಥಿ ಮುಖೇಶ್ ರಜಪೂತ್ ಅವರಿಗೆ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ (ಇವಿಎಂ) ಕನಿಷ್ಠ 8 ಬಾರಿ ಮತ ಚಲಾಯಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ