ಮಾಸ್ಕೋ : ರಷ್ಯಾದ ಕರಾವಳಿ ಪ್ರದೇಶದಲ್ಲಿ 8.7 ತೀವ್ರತೆಯ ಭಾರೀ ಭೂಕಂಪ ಸಂಭವಿಸಿದೆ. ಇದು 1952ರ ಬಳಿಕ ಸಂಭವಿಸಿದ ಅತೀ ಪ್ರಬಲ ಭೂಕಂಪವಾಗಿದೆ. ಅಮೆರಿಕದ ಅಲಾಸ್ಕಾದ ಭಾಗಗಳು ಹಾಗೂ ಜಪಾನ್‌ಗೆ ಸುನಾಮಿಯ ಎಚ್ಚರಿಕೆ ನೀಡಲಾಗಿದೆ.
ಇಲ್ಲಿನ ಪೂರ್ವ ಕಮ್ಚಟ್ಕಾ ದ್ವೀಪದ ಪೆನಿನ್ಸುಲಾದಲ್ಲಿರುವ ಪೆಟ್ರೋಪಾವ್ಲೋವ್ಸಕ್ ನಿಂದ ಸುಮಾರು 136 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ. 19 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದ್ದು, 4 ಮೀಟರ್ (13 ಅಡಿ) ವರೆಗಿನ ಸುನಾಮಿ ಅಪ್ಪಳಿಸಿದೆ.
ಅಮೆರಿಕದ ಅಧಿಕಾರಿಗಳು ಅಲಾಸ್ಕಾದ ಭಾಗಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಜಪಾನ್‌ನ ಹವಾಮಾನ ಇಲಾಖೆಯು ಸುನಾಮಿ ಎಚ್ಚರಿಕೆ ನೀಡಿದೆ. ಕಮ್ಚಟ್ಕಾದ ಕೆಲವು ಭಾಗಗಳಲ್ಲಿ 3-4 ಮೀಟರ್ (10-13 ಅಡಿ) ಎತ್ತರದ ಸುನಾಮಿ ದಾಖಲಾಗಿದೆ ಪ್ರಾದೇಶಿಕ ಸಚಿವ ಸೆರ್ಗೆಯ್ ಲೆಬೆಡೆವ್ ತಿಳಿಸಿದ್ದಾರೆ.
ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪದ ಕೇಂದ್ರಬಿಂದು 19.3 ಕಿಮೀ (12 ಮೈಲುಗಳು) ಆಳದಲ್ಲಿ ಪತ್ತೆಯಾಗಿದೆ. ಸದ್ಯಕ್ಕೆ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ರಷ್ಯಾದ ಬಳಿ ಸಂಭವಿಸಿದ ಪ್ರಬಲ ಭೂಕಂಪದ ಕಾರಣ, ಜಪಾನ್ ದೇಶದಲ್ಲೂ ಸುನಾಮಿ ಎಚ್ಚರಿಕೆ ನೀಡಿದೆ. ಒಂದು ಮೀಟರ್ ಎತ್ತರದ ಅಲೆಗಳು ಜಪಾನ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಿದೆ.