ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ ಐದು ದಿನಗಳಿರುವಾಗಲೇ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ಗೆ ಬಹುದೊಡ್ಡ ಆಘಾತ ಎದುರಾಗಿದ್ದು, ಟಿಕೆಟ್ ಸಿಗದೇ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದ 8 ಶಾಸಕರು ಎಎಪಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ಇದು ಮತ್ತೆ ದಿಲ್ಲಿಯ ಅಧಿಕಾರದ ಗದ್ದುಗೆ ಹಿಡಿದು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಅರವಿಂದ್ ಕೇಜ್ರಿವಾಲ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಾಜೀನಾಮೆ ನೀಡಿದ ಶಾಸಕರ ಪೈಕಿ ನರೇಶ್ ಯಾದವ್ (ಮೆಹ್ರೌಲಿ), ರೋಹಿತ್ ಕುಮಾರ್ (ತ್ರಿಲೋಕಪುರಿ), ರಾಜೇಶ್ ರಿಷಿ (ಜನಕ್ಪುರಿ), ಮದನ್ ಲಾಲ್ (ಕಸ್ತೂರ್ಬಾ ನಗರ), ಪವನ್ ಶರ್ಮಾ (ಆದರ್ಶ ನಗರ), ಮತ್ತು ಭಾವನಾ ಗೌಡ್ (ಪಾಲಂ). ಬಿಎಸ್ ಜೂನ್ (ಬಿಜ್ವಾಸನ್) ಮತ್ತು ಗಿರೀಶ್ ಸೋನಿ (ಮಾದಿಪುರ್) ಸೇರಿದ್ದಾರೆ.
ಪಾಲಂ ಕ್ಷೇತ್ರದ ಭಾವನಾ ಗೌರ್ ತಮ್ಮ ರಾಜೀನಾಮೆ ಪತ್ರದಲ್ಲಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಬಗ್ಗೆ ತಮ್ಮ ನಿರಾಶೆ ವ್ಯಕ್ತಪಡಿಸಿದ್ದು, “ನಿಮ್ಮ ಮೇಲಿನ ನಂಬಿಕೆಯ ಕಳೆದುಕೊಂಡಿದ್ದೇನೆ” ಎಂದು ಹೇಳಿದ್ದಾರೆ. ನರೇಶ್ ಯಾದವ್ ಈ ಹಿಂದೆ ಮೆಹ್ರೌಲಿ ಅಭ್ಯರ್ಥಿಯಾಗಿದ್ದರು. ಡಿಸೆಂಬರ್ನಲ್ಲಿ ಕುರಾನ್ ಅಪವಿತ್ರ ಪ್ರಕರಣದಲ್ಲಿ ಪಂಜಾಬ್ ನ್ಯಾಯಾಲಯದಿಂದ ಅವರು ದೋಷಿ ಎಂದು ಸಾಬೀತಾಯಿತು ಮತ್ತು ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು.
ಫೆಬ್ರವರಿ 5 ರಂದು ನಡೆಯಲಿರುವ ದೆಹಲಿ ಚುನಾವಣೆಗೆ ಎಎಪಿ ತನ್ನ ಐದನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದಾಗ, ನರೇಶ್ ಯಾದವ್ ಬದಲಿಗೆ ಮಹೇಂದರ್ ಚೌಧರಿ ಅವರನ್ನು ಎಎಪಿ ತನ್ನ ಮೆಹ್ರೌಲಿ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿತು. ಪಕ್ಷದ ಈ ನಡೆಯಿಂದ ನರೇಶ್ ಯಾದವ್ ಅಸಮಾಧಾನಗೊಂಡಿದ್ದರು.